ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪೊಲೀಸ್ ಇಲಾಖೆ, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಸಹಯೋಗದೊಂದಿಗೆ ನ್ಯಾಯಾಲಯದ ಆವರಣದಲ್ಲಿ, ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಿರಿಯ ಶ್ರೇಣಿ ನ್ಯಾಯಾಧೀಶರಾದ ಸಿ.ಮಹಾಲಕ್ಷ್ಮಿ ಉದ್ಘಾಟಸಿ ಮಾತನಾಡಿ, ಹೆಣ್ಣು ಬಲಿ ಪಶುವಾಗಬಾರದು. ಧೀರತನ ದಿಟ್ಟತನದ ಸ್ವಾವಲಂಬಿ ಬದುಕು ನಡೆಸಬೇಕು, ಸಿಂಹಿಣಿಯಂತೆ ಧೈರ್ಯ ಹಾಗೂ ಚಾಣಕ್ಷತನದಿಂದ ಸ್ವಾಭಿಮಾನದಿಂದ ಜೀವಿಸಬೇಕೆಂದು ಕರೆ ನೀಡಿದರು.
ಮಹಿಳೆಯರು ಶೈಕ್ಷಣಿಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಪ್ರತಿಯೊಬ್ಬರೂ ಕಾನೂನು ಜ್ಞಾನ ಅವಶ್ಯವಾಗಿ ಪಡೆಯಬೇಕಿದೆ ಮತ್ತು ಉಚಿತ ಕಾನೂನು ಸೇವಾ ಸಮಿತಿಯ ಸದಪಯೋಗ ಪಡೆದುಕೊಳ್ಳಬೇಕಿದೆ ಎಂದರು.
ವಿಚ್ಚೇದನ ಪ್ರಕರಣಗಳು ಹೆಚ್ಚುತ್ತಿರುವುದು ಖೇದದ ಸಂಗತಿಯಾಗಿದ್ದು, ಕ್ಷುಲ್ಲಕ ಕಾರಣಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡುವುದು ಸಾಮಾನ್ಯವಾಗಿದೆ. ಕೌಟುಂಬಿಕ ಕಲಹಗಳಿಂದಾಗಿ ಸಂಬಂಧಗಳಲ್ಲಿ ಒಡಕುಂಟಾಗಿ, ಬಾಂಧವ್ಯ ಭಾವನಾತ್ಮಕ ಸಂಬಂಧಗಳು ಸ್ವ ಪ್ರತಿಷ್ಠೆಗಳಿಗೆ ಬಲಿಕೊಡಲಾಗುತ್ತಿದೆ. ಎಂತಹ ಸಂದರ್ಭದಲ್ಲಿಯೂ ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು, ಚಾಣಾಕ್ಷತನ ಬುದ್ಧಿವಂತಿಕೆಯಿಂದ ಸಮಸ್ಯೆಗಳ ವಿರುದ್ಧ ತಾರ್ಕಿಕವಾಗಿ ಹೋರಾಡಬೇಕು. ಕಾನೂನು ತಿಳುವಳಿಕೆಯ ನಡೆಯೊಂದಿಗೆ ಸಮಸ್ಯೆಗಳನ್ನು, ಪ್ರಜ್ಞಾವಂತರ ಹಿರಿಯೆ ಸೂಚನೆಗಳೊಂದಿಗೆ ಮನೆಯೊಳಗೆ ಬಗೆ ಹರಿಸಿಕೊಳ್ಳೋದು ಕ್ಷೇಮ ಎಂದರು.
ಪ್ರಾಚಾರ್ಯೆ ಟಿ.ಕೋತ್ಲಮ್ಮ, ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಂ ಶೈಲಜಾ, ಪ್ಯಾನಲ್ ವಕೀಲರಾದ ಜಯಮ್ಮ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಜಿ ಶಿವಪ್ರಸಾದ್ ವೇದಿಕೆಯಲ್ಲಿದ್ದರು. ವಕೀಲ ಡಿ.ಕರಿಬಸವರಾಜ್ ಸ್ವಾಗತಿಸಿದರು. ಪ್ಯಾನಲ್ ವಕೀಲ ಟಿ.ರಮೇಶ್ ವಂದಿಸಿದರು. ನ್ಯಾಯಾಲಯದ ಸಿಬ್ಬಂದಿಯವರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳು, ನ್ಯಾಯಾಲಯಕ್ಕೆ ಹಾಜರಾಗಿದ್ದ ಕಕ್ಷಿದಾರರು ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.