ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನದ ಪೋಸ್ಟರ್ನ್ನು ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಗುರುವಾರ ಆದೇಶ ಹೊರಡಿಸಿದ್ದು ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ದೊಡ್ಡ ಮಟ್ಟಜ ನಿರಾಳ ಸಿಕ್ಕಿದೆ.
ಎಫ್ಐಆರ್ ಗೆ ತಡೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅರ್ಜಿ ವಿಚಾರಣೆ ಮಾಡಿದ್ದು, ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ಗೂ ಎಕ್ಸ್ನ ಪೋಸ್ಟ್ಗೂ ಸಂಬಂಧವಿಲ್ಲವೆಂದು ಡಿಕೆ ಶಿವಕುಮಾರ್ ಪರ ವಕೀಲ ಹೆಚ್.ವಿ.ಪ್ರವೀಣ್ ಗೌಡ ವಾದಿಸಿದ್ದಾರೆ. ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
ಹುಬ್ಬಳ್ಳಿಯಲ್ಲಿ 1992ರಲ್ಲಿ ನಡೆದ ರಾಮ ಜನ್ಮಭೂಮಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ಬಳಿಕ ಅಂದರೆ ರಾಮ ಮಂದಿರ ಉದ್ಘಾಟನೆಗೆ ಸಮಯದಲ್ಲಿ ಕಾಂಗ್ರೆಸ್ಸರ್ಕಾರ ಬಂಧಿಸಿ ಜೈಲಿಗಟ್ಟಿತ್ತು. ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿ ಬಂಧಿಸಿದ್ದಾರೆ. ಹೀಗಾಗಿ ಇದನ್ನು ಖಂಡಿಸಿ ಬಿಜೆಪಿ ನಾಯಕರು ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ವಿಭಿನ್ನ ಅಭಿಯಾನ ಮಾಡಿದ್ದರು.
ಇದನ್ನು ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ತಿರುಚಿ ಪೋಸ್ಟರ್ಗಳನ್ನು ಹಾಕಿದ್ದರು.ಕಾಂಗ್ರೆಸ್ ತಿರುಚಿದ ಪೋಸ್ಟರ್ಗಳು ಫೋರ್ಜರಿ ಮತ್ತು ಎರಡು ಗುಂಪುಗಳನಡುವೆ ದ್ವೇಷ ಮೂಡಿಸಿದ ಆರೋಪ ಹಿನ್ನೆಲೆ ದೂರು ದಾಖಲಾಗಿತ್ತು. ಬಿಜೆಪಿ ಕಾನೂನು ಪ್ರಕೋಷ್ಠ ಮಾಜಿ ಸಂಚಾಲಕ ಯೋಗೇಂದ್ರ ಹೊಡಘಟ್ಟ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಹೈಗ್ರೌಂಡ ಪೊಲೀಸರು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಿಆರ್ ನಾಯ್ಡು ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅರ್ಜಿ ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು.

