ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯನವರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ವಿಚಾರಕ್ಕೆ ಅವರು ಭೇಟಿಯಾಗಿದ್ದರು, ಏನು ಚರ್ಚೆ ಮಾಡಿದ್ದಾರೆಂಬುದು ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ-ರಾಹುಲ್ ಭೇಟಿ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಡಿಕೆ ಶಿವಕುಮಾರ್ ಅವರು, ಸಾಮಾನ್ಯವಾಗಿ ಸಿಎಂ ಬಂದಾಗ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಸಹಜ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಏನಾದರೂ ಇದ್ದರೆ ಸಿಎಂ ಹತ್ತಿರ ಮಾತನಾಡಿ. ಪಕ್ಷ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುವುದು ನನ್ನ ಕೆಲಸ. ಪಕ್ಷದ ಹೈಕಮಾಂಡ್ ನನ್ನ ಕೇಳ್ತಾರೆ, ಆಗ ನಾನು ಮಾತನಾಡುತ್ತೇನೆ. ಏನು ಮಾತಾಡಬೇಕೆಂದು ನನಗೆ ಗೊತ್ತು ಎಂದು ದೆಹಲಿಯಲ್ಲಿ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.
ಹೈಕಮಾಂಡ್ ಅವರನ್ನು ಸಿಎಂ ಭೇಟಿ ಮಾಡಿದರೆ ತಪ್ಪೇನು, ಅವರು ಯಾರನ್ನೂ ಬೇಕಾದರೆ ಭೇಟಿ ಮಾಡುವ ಅಧಿಕಾರ ಅವರಿಗಿದೆ, ನಾನು ಭೇಟಿ ಮಾಡಿದರೆ ಏನು ಕೇಳುತ್ತಾರೆ ಎಂದು ನನಗೆ ಗೊತ್ತಿದೆ, ಅದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದಷ್ಟೇ ಹೇಳಿದರು.
ಸಚಿವ ಸಂಪುಟ ಪುನಾರಚನೆ ಬಗ್ಗೆ ಈಗ ತೀವ್ರ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ.

