ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ-ಡಿಕೆ ಶಿವಕುಮಾರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಎಲ್ಲಾ ನಗರಗಳಲ್ಲಿ ಮುಂದಿನ 25 ವರ್ಷಗಳ ದೂರದೃಷ್ಠಿಯ  ಪ್ರಗತಿ ಗಮನದಲ್ಲಿಟ್ಟುಕೊಂಡು ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ಬಳಿಕ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಡಿಸಿಎಂ ಮಾತನಾಡಿದರು.

ದಾವೋಸ್ ಕಾರ್ಯಕ್ರಮದಲ್ಲಿ ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿವೆ. ಇಡೀ ರಾಜ್ಯದಲ್ಲಿ ಎಲ್ಲಾ ನಗರ ಪ್ರದೇಶಗಳಿಗೆ ಮುಂದಿನ 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ, ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

- Advertisement - 

ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು 70% ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರ ಅವರದ್ದಾಗಿದೆ. ನಮ್ಮ ಪ್ರಗತಿ ನೋಡಿ ಅವರು ಈ ಲೆಕ್ಕಾಚಾರ ಮಾಡಿದ್ದಾರೆ. ಇದಕ್ಕೆ ಯಾವ ತಯಾರಿ ನಡೆಸಿದ್ದೀರಿ ಎಂದು ಕೇಳಿದರು.

ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರಿ ಗ್ರಿಡ್ ರೂಪಿಸಬೇಕು ಎಂದು ತೀರ್ಮಾನಿಸಿದ್ದೇವೆ. ಎಲ್ಲಿ ರಸ್ತೆ ಬರುತ್ತದೆ, ರಸ್ತೆ ಅಗಲೀಕರಣ ಎಷ್ಟಿರಬೇಕು ಎಂಬುದರ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಹೊಸ ತೀರ್ಮಾನ ಮಾಡಬೇಕಿದೆ. ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಅಧಿಸೂಚನೆ ಹೊರಡಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರಲು ತಡವಾಗಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.

- Advertisement - 

45ಕ್ಕೂ ಹೆಚ್ಚು ಕಂಪನಿಗಳ ಜೊತೆ ಹೂಡಿಕೆ ಬಗ್ಗೆ ಚರ್ಚೆ: ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ನಮ್ಮಲ್ಲಿ ಲಭ್ಯವಿರುವ ನೀರು, ವಿದ್ಯುತ್ ಪ್ರಮಾಣ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕಂಪನಿಗಳು ಪಡೆದಿವೆ. ಹೊರ ದೇಶಗಳಲ್ಲಿ ಉದ್ಯಮ ಮಾಡುತ್ತಿರುವ ಅನಿವಾಸಿ ಭಾರತೀಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.

ಈ ಬಾರಿಯ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ಅಲ್ಲಿ ಸಹಿ ಹಾಕುವುದು ಬೇಡ ಎಂದು ನಿರ್ಧರಿಸಿದ್ದೇವೆ. ಹೊರ ದೇಶಗಳ ಕಂಪನಿಗಳು ಇಲ್ಲಿಗೆ ಬಂದು, ಇಲ್ಲಿನ ವಾತಾವರಣ, ಯುವ ಪ್ರತಿಭೆ, ಇಲ್ಲಿನ ಸೌಲಭ್ಯ, ಇಂಧನ, ನೀರಿನ ಸೌಲಭ್ಯ ಗಮನಿಸಬೇಕು.

ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 11 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಇದರಲ್ಲಿ 50% ನಷ್ಟು ಹೂಡಿಕೆ ಕಾರ್ಯಗತಗೊಳ್ಳುತ್ತಿದೆ. ಹೀಗಾಗಿ ದಾವೋಸ್​ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣ: ಬಿಡದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಐ ಸಿಟಿಗೆ ಅನೇಕರು ಉತ್ಸುಕರಾಗಿದ್ದಾರೆ. ಈ ಯೋಜನೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿರಬಹುದು. ರೈತರು ತಾವಾಗಿಯೇ ಜಮೀನು ಬಿಟ್ಟುಕೊಡುವಾಗ ಈ ಅಭಿವೃದ್ಧಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಯ ಭೂಸಂತ್ರಸ್ತ ರೈತರಿಗೆ ನಾವು ನೀಡಿರುವ ಪರಿಹಾರದ ಅವಕಾಶವನ್ನು ದೇಶದ ಇತರೆ ಯಾವುದೇ ಭಾಗದಲ್ಲಿ ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ವಿಶ್ವದ ನಾಯಕರು, ಉದ್ಯಮಿಗಳ ಭೇಟಿ: ಎ ಸ್ಪಿರಿಟ್ ಆಪ್ ಡೈಲಾಗ್ಸ್ ಪರಿಕಲ್ಪನೆಯಲ್ಲಿ ಈ ವರ್ಷ 56ನೇ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಇಲ್ಲಿ ಭಾರತದಿಂದ 10 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಸೇರಿದಂತೆ 65 ದೇಶಗಳ ಸರ್ಕಾರದ ಮುಖ್ಯಸ್ಥರು ಹಾಗೂ ಎಲಾನ್ ಮಸ್ಕ್ ಸೇರಿದಂತೆ ವಿಶ್ವದ ಅನೇಕ ದೊಡ್ಡ ಉದ್ಯಮಿಗಳು ಭಾಗವಹಿಸಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ತಿಳಿಸಿದರು.

ಬೆಂಗಳೂರಿನ ಮೂಲಕ ಭಾರತವನ್ನು ನೋಡುವುದನ್ನು ನಾನು ಇಲ್ಲಿ ಕಂಡೆ. ಬೆಂಗಳೂರಿನಲ್ಲಿ ಈಗಾಗಲೇ 450ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಿವೆ. 2047 ವೇಳೆಗೆ ಭಾರತದಲ್ಲಿನ ಜನ ನಗರ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಳಾಂತರವಾಗುತ್ತಾರೆ. ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಚರ್ಚೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಅನೇಕರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಅಮೆರಿಕದ ಕಂಪನಿಗಳು ಕೂಡ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.

ಟನಲ್ ರಸ್ತೆ ವಿಚಾರವಾಗಿ ಜೈಕಾ ಜೊತೆ ಚರ್ಚೆ: ನಮ್ಮ ಟನಲ್ ರಸ್ತೆ ಎಲ್ಲಾ ಕಡೆಗಳಿಗಿಂತ ಆಧುನಿಕವಾಗಿದೆ. ನಮ್ಮ ಮಾದರಿಯಲ್ಲೇ ಮಹಾರಾಷ್ಟ್ರದವರು ಜಪಾನಿನ ಜೈಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರಂತೆ. ನಾನು ಕೂಡ ಜಪಾನ್ ಪ್ರವಾಸ ಮಾಡಿ ನೋಡುತ್ತೇನೆ. ಜೈಕಾ ಸಂಸ್ಥೆ ಯವರು ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಸಹಾಯ ಮಾಡಿದ್ದು, ಎರಡನೇ ಟನಲ್ ರಸ್ತೆಗೆ ಸಹಾಯ ಮಾಡುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಇಡೀ ದಾವೋಸ್ ನಮ್ಮ ಸದಾಶಿವನಗರ, ಅರಮನೆ ಮೈದಾನದಷ್ಟು ವ್ಯಾಪ್ತಿಯಲ್ಲಿರಬಹುದು. ಅಷ್ಟು ಸಣ್ಣ ಪ್ರದೇಶದಲ್ಲಿ ಎಲ್ಲಾ ಪ್ರಮುಖ ನಾಯಕರು ರಸ್ತೆ ಮಾರ್ಗದಲ್ಲೇ ಸಂಚಾರ ಮಾಡಿದರು. ನಾನು ಜ್ಯೂರಿಚ್ ಕಡೆ 200 ಕಿ.ಮೀ ಪ್ರಯಾಣ ಮಾಡುವಾಗ ಸುಮಾರು 30-40 ಟನಲ್ ರಸ್ತೆಗಳಿವೆ. 60 ವರ್ಷಗಳ ಹಿಂದೆಯೇ ಟನಲ್ ರಸ್ತೆ ನಿರ್ಮಿಸಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಅಲ್ಲಿನ ಶಿಸ್ತು, ಸಂಚಾರ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಗಮನಿಸಿದೆ. ಈ ಪ್ರವಾಸ ರಾಜ್ಯಕ್ಕೆ ಇದೊಂದು ಫಲಪ್ರದಾಯಕ ಕಾರ್ಯಕ್ರಮವಾಗಿತ್ತು. ನಮ್ಮಲ್ಲಿ ಬಂಡವಾಳ ಆಕರ್ಷಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಉತ್ತಮ ವೇದಿಕೆಯಾಗಿತ್ತು ಎಂದು ಡಿಸಿಎಂ ತಿಳಿಸಿದರು.

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ಹಣವನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ. ಅದಕ್ಕಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಟನಲ್ ರಸ್ತೆಗಳು, 123 ಕಿ.ಮೀ ಎಲಿವೇಟೆಡ್ ಕಾರಿಡಾರ್, 300 ಕಿ.ಮೀ ಉದ್ದದ ಬಫರ್ ರೋಡ್ ನಿರ್ಮಿಸಲಾಗುತ್ತಿದೆ ಎಂದು ಡಿಸಿಎಂ ಪ್ರತಿಕ್ರಿಯೆ ನೀಡಿದರು.

Share This Article
error: Content is protected !!
";