ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಿಬಿಎ ಪಾಲಿಕೆಗಳ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದೊಳಗೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುಪ್ರೀಂ ಕೋರ್ಟ್ ಗಡುವು ನೀಡಿರುವುದರ ಕುರಿತು ಅರಮನೆ ಮೈದಾನ ಆವರಣದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನ್ಯಾಯಾಲಯದ ಮುಂದೆ ರಾಜ್ಯ ಚುನಾವಣಾ ಆಯೋಗವು ಅಫಿಡವಿಟ್ ಸಲ್ಲಿಸಿದ್ದು, ಅದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಎಲ್ಲಾ ರೀತಿಯ ಆದೇಶ ನೀಡಲಿದೆ. ನಮಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯಬೇಕು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನುಸಾರ ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ ಎಂದು ಅವರು ತಿಳಿಸಿದರು.
ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಪ್ರತಿಕ್ರಿಯಿಸಿ, ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕೆ ಸಮಿತಿ ರಚಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲಿದ್ದು, ಅವರಿಗೆ ಏನು ನಿರ್ದೇಶನ ನೀಡಬೇಕೋ ನೀಡುತ್ತೇವೆ ಎಂದು ಡಿಸಿಎಂ ತಿಳಿಸಿದರು.
ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಇದನ್ನು ನಾನು ಗಮನಿಸಿಲ್ಲ. ಇದನ್ನು ಪರಿಶೀಲಿಸಿ ತಪ್ಪಾಗಿದ್ದರೆ ಸರಿಪಡಿಸಲು ಅವರಿಗೆ ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ನ್ಯಾಯಾಲಯದ ಬಳಿ ಚುನಾವಣೆ ನಡೆಸಲು ಕಾಲಾವಕಾಶ ಕೇಳುತ್ತೀರಾ ಎನ್ನುವ ಪ್ರಶ್ನೆಗೆ, ನಾವು ಯಾವುದೇ ಕಾಲಾವಕಾಶ ಕೇಳುವುದಿಲ್ಲ ಎಂದು ಅವರು ಹೇಳಿದರು.
ಜನಬೆಂಬಲ ನೀಡುವ ವಿಶ್ವಾಸವಿದೆ:
ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಡುವುದು, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಬಿಜೆಪಿ-ಜೆಡಿಎಸ್ ಒಂದಾಗಬೇಕು:
ಎನ್ ಡಿಎ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಫ್ರೆಂಡ್ಲಿ ಫೈಟ್ ಕುರಿತು ಕೇಳಿದ ಪ್ರಶ್ನೆಗೆ ಬಿಜೆಪಿ-ಜೆಡಿಎಸ್ ನವರು ಏನಾದರೂ ಮಾಡಿಕೊಳ್ಳಲಿ. ಜತೆಯಾಗಿಯಾದರೂ ಚುನಾವಣೆ ಮಾಡಲಿ, ಬೇರೆಯಾಗಿ ಬೇಕಾದರೂ ಮಾಡಲಿ. ಅವರು ಸಂಸತ್ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಮಾಡಿದಂತೆ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆಯನ್ನು ಮಾಡಿದರೆ ನೇರ ಹಣಾಹಣಿ ಇರುತ್ತದೆ ಎಂದು ಡಿಸಿಎಂ ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಈ ವರ್ಷದ ಜೂನ್ ಅಂತ್ಯದೊಳಗೆ ಮುಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೋಮವಾರ ನಿರ್ದೇಶನ ನೀಡಿದ ನಂತರ ಡಿಸಿಎಂ ಮಾತನಾಡಿದರು.
ನೂತನವಾಗಿ ರಚನೆಯಾಗಿರುವ ಜಿಬಿಎ ಪ್ರಾಧಿಕಾರದ ಅಡಿಯಲ್ಲಿ ಬರುವ 5 ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್- 30 ರೊಳಗೆ ಪೂರ್ಣಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಗಡುವು ವಿಧಿಸಿ ಆದೇಶಿಸಿದೆ. ಈ ಹಿಂದೆ, ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು 2026ರ ಫೆಬ್ರವರಿಯಲ್ಲಿ ನಡೆಸುವುದಾಗಿ ತಿಳಿಸಿತ್ತು. ಆದರೆ, ವಾರ್ಡ್ಗಳ ವಿಂಗಡಣೆ, ಮೀಸಲಾತಿ, ಹೊಸ ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸಿರಲಿಲ್ಲ.

