ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಡಿ.ಕೆ.ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಪಿಎಲ್ ಕಪ್ ಗೆದ್ದ ಆರ್ ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

- Advertisement - 

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ದುರ್ಘಟನೆಯಲ್ಲಿ ಮೃತಪಟ್ಟ ಮಕ್ಕಳನ್ನು ನೆನೆದು ಡಿಸಿಎಂ ಕಣ್ಣೀರು ಹಾಕಿದರು.

- Advertisement - 

ನನಗೆ ಹೊಟ್ಟೆ ಉರಿಯುತ್ತಿದೆ. ಆ ಮಕ್ಕಳ ತಾಯಿ ಮಾತನಾಡೋದನ್ನು ಸಹಿಸಲು ಆಗುತ್ತಿಲ್ಲ. ಈಗ ಆಗಿರುವ ಸಾವು, ನಮ್ಮ ಮನೆಯಲ್ಲೇ ಆಗಿದೆ. ಸಾವು ಸಂಭವಿಸಿರುವ ಕುಟುಂಬಗಳು ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಈ ನೋವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಒಬ್ಬರು, ಇಬ್ಬರ ತಪ್ಪು ಎಂದು ಹೇಳಲು ಆಗುವುದಿಲ್ಲ. ಖಂಡಿತವಾಗಿಯೂ ನಾವು ಇದನ್ನು ಪರಿಶೀಲನೆ ಮಾಡಲೇಬೇಕಾಗಿದೆ. ಇದರಿಂದ ನಾವು ಪಾಠವನ್ನು ಕೂಡ ಕಲಿಯಬೇಕಾಗಿದೆ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ಬಿಜೆಪಿ ಹಾಗೂ ಜೆಡಿಎಸ್​ನವರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಅವರು ಮೊದಲಿಂದಲೂ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಅವರ ಆಡಳಿತಾವಧಿಯಲ್ಲಿ ಏನಾಗಿದೆ ಎನ್ನುವುದು ಗೊತ್ತು. ಅದನ್ನೆಲ್ಲ ಹೇಳಿ, ನಾನು ಕೂಡ ಅವರ ಥರ ರಾಜಕಾರಣ ಮಾಡಲು ನನಗಿಷ್ಟ ಇಲ್ಲ. ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ನಾನೇ ಕಣ್ಣಾರೆ ನೋಡಿದ್ದೇನೆ. ಯಾವ ಕುಟುಂಬ ಕೂಡ ಆ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿ ಭಾವುಕರಾದರು.

- Advertisement - 

ಇಂತಹ ದುರ್ಘಟನೆ, ಪರಿಸ್ಥಿತಿ ನಿರ್ಮಾಣ ಆಗುತ್ತೆ ಎನ್ನುವುದನ್ನು ನಾವ್ಯಾರು ಅಪೇಕ್ಷಿಸಿರಲಿಲ್ಲ. ಜೊತೆಗೆ ಆರ್​ಸಿಬಿಯವರು ಕೂಡ ಬೆಂಗಳೂರಿಗೆ ಬರುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದರು. ನಮ್ಮ ಸರ್ಕಾರಕ್ಕೂ ಕೂಡ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಕೆಎಸ್​ಸಿಎ ಆಡಳಿತ ಮಂಡಳಿಯವರಿಗೂ ಹೋಗೋದಿಕ್ಕೂ ಆಗುತ್ತಿರಲಿಲ್ಲ. ನಾನೇ ನನ್ನ ಕಾರಲ್ಲಿ ಕೂರಿಸಿಕೊಂಡು ಅವರನ್ನು ಕರೆದುಕೊಂಡು ಹೋದೆ. ಕೆಎಸ್​ಸಿಎಗೆ ನನ್ನನ್ನೂ ಆಹ್ವಾನಿಸಿದ್ದರು. ಆದರೆ ನನಗೆ ಹೋಗುವ ಆಸಕ್ತಿ ಇರಲಿಲ್ಲ. ಆಮೇಲೆ ಆಡಳಿತ ಮಂಡಳಿಯವರನ್ನು ನನ್ನ ಕಾರಲ್ಲೇ ಕೂರಿಸಿಕೊಂಡು ಕರೆದುಕೊಂಡು ಹೋಗಬೇಕಾಯಿತು ಎಂದು ಡಿಸಿಎಂ ಶಿವಕುಮಾರ್ ವಿವರಿಸಿದರು.

ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗೋವರೆಗೂ ಈ ರೀತಿಯ ದುರ್ಘಟನೆ ಆಗಿದೆ ಎನ್ನುವುದು ನನಗೂ ಗೊತ್ತಿರಲಿಲ್ಲ. ಮಾಧ್ಯಮದವರೇ ಹೀಗಾಗಿದೆ ಅಂತ ತಿಳಿಸಿದ್ದು. ಆಮೇಲೆ ಕಮಿಷನರ್​ ಕೂಡ ಬಂದು ಹೀಗಾಗಿದೆ ಅಂತ ಹೇಳಿದರು. ಹತ್ತು ನಿಮಿಷದೊಳಗೆ ಕಾರ್ಯಕ್ರಮ ಮುಗಿಸುವಂತೆ ಹೇಳಿದರು. ನಾನು ಕೂಡ ಬೇಗ ಬೇಗ ಕಾರ್ಯಕ್ರಮ ಮುಗಿಸುವಂತೆ ಅವಸರ ಮಾಡಿದೆ. ಅವರು ಕೂಡ ಅಲ್ಲಿ ಯಾವುದೇ ಅನೌನ್ಸ್​ಮೆಂಟ್​ ಕೂಡ ಮಾಡಿಲ್ಲ. ಯಾರಿಗೂ ಮಾತಾಡೋಕೆ ಅವಕಾಶ ಕೊಟ್ಟಿಲ್ಲ. 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸೋದಕ್ಕೆ ಅವರು ಕೂಡ ಒಪ್ಪಿಕೊಂಡರು ಎಂದು ಡಿಸಿಎಂ ತಿಳಿಸಿದರು.

ಈಗ ಆಗಿರುವ ದುರ್ಘಟನೆಗೆ ಒಬ್ಬರ ಇಬ್ಬರ ಮೇಲೆ ಅಪವಾದ ಹೊರಿಸುವ ಸಮಯ ಅಲ್ಲ. ಜೊತೆಗೆ ರಾಜಕೀಯ ಮಾತಾಡುವುದು ಕೂಡ ಸರಿಯಲ್ಲ. ಯಾರು ಏನೇ ಹೇಳಲಿ, ಟೀಕೆ ಮಾಡಲಿ. ಸದನದಲ್ಲಿ ಎಲ್ಲವೂ ಬರಲಿದೆ. ಅವರವರ ಕಾಲದಲ್ಲಿ ಏನಾಯ್ತು ಅಂತ ಗೊತ್ತಿದೆ. ರಾಜ್ ಕುಮಾರ್ ಸತ್ತಾಗ ಏನಾಯ್ತು ಅಂತ ಗೊತ್ತಿದೆ. ನಾನು ಆಗ ದೆಹಲಿಯಲ್ಲಿ ಇದ್ದೆ. ಕುಮಾರಸ್ವಾಮಿ ಟೀಕೆ ಮಾಡುತ್ತಲೇ ಇರಲಿ. ಗಲೀಜು ಪಾಲಿಟಿಕ್ಸ್ ನಾನು ಮಾತಾಡಲ್ಲ. ನಾವು ಬೇರೆ ಯಾರನ್ನೋ ದೂಷಿಸೋದಿಲ್ಲ. ಯಾರೇ ಮಾಡಿದರೂ ಕೂಡ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಇದು ನಮ್ಮ ಮನೆಯ ನೋವಾಗಿದೆ ಎಂದು ಡಿಸಿಎಂ ಹೇಳಿದರು.

ಇದು ಇಮೇಜ್ ಆಫ್ ಕರ್ನಾಟಕ, ಇಮೇಜ್​ ಆಫ್​ ಬೆಂಗಳೂರು. ಪೋಸ್ಟ್ ಮಾರ್ಟಮ್ ಮಾಡಬೇಡಿ ಮೃತದೇಹವನ್ನು ಕೊಟ್ಟುಬಿಡಿ ಅಂತ ಒಬ್ಬ ತಾಯಿ ಹೇಳ್ತಾರೆ. ಎಷ್ಟು ಹೊಟ್ಟೆ ಉರಿಯಬೇಕು ಅಲ್ವಾ ಆ ತಾಯಿಗೆ. ರಾಜಕೀಯ ಮಾಡೋದು ಬೇಡ. ಕೆಲವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಮಾಡಲಿ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

 

Share This Article
error: Content is protected !!
";