ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿನ್ನಸ್ವಾಮಿ ಕ್ರೀಡಾಂಗಣವನ್ನು ಕಾನೂನಿನ ಚೌಕಟ್ಟಿನಲ್ಲಿ ಬಳಸುತ್ತೇವೆ ಹಾಗೂ ಪರ್ಯಾಯವಾಗಿ ಮತ್ತೊಂದು ದೊಡ್ಡ ಕ್ರೀಡಾಂಗಣ ನಿರ್ಮಾಣ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಂತಹ ದುರಂತಗಳು ಮುಂದೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಐಪಿಎಲ್ ಇರಲಿ, ವಿಶ್ವಕಪ್ ಪಂದ್ಯಗಳಿರಲಿ ಮುಂದೆ ಯಾವುದೇ ಅವಕಾಶಗಳು ಇಲ್ಲಿಂದ ಕೈತಪ್ಪಲು ಬಿಡುವುದಿಲ್ಲ. ಇಲ್ಲಿಯೇ ಆಯೋಜಿಸುತ್ತೇವೆ. ಇದು ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಗೌರವ. ನಾವು ಇದನ್ನು ಉಳಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ಪ್ರಸನ್ನ ಎಲ್ಲರೂ ಪರಿಚಯದವರೆ. ಕೆಎಸ್‌ಸಿಎ ಸದಸ್ಯನಾಗಿ, ಕ್ರಿಕೆಟ್ ಪ್ರೇಮಿಯಾಗಿ ಮತ ಚಲಾಯಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಹಣಾಹಣಿ:
ಮಾಜಿ ಕ್ರಿಕೆಟಿಗ ಬಿ.ಕೆ.ವೆಂಕಟೇಶ್ ಪ್ರಸಾದ್ ಹಾಗೂ ಬ್ರಿಜೇಶ್ ಪಟೇಲ್ ಬಣಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆ. ವೆಂಕಟೇಶ್ ಪ್ರಸಾದ್ ಬಣದವರು ಕೆಎಸ್‌ಸಿಎ ಸದಸ್ಯರೊಂದಿಗೆ ಸಂವಾದ ನಡೆಸಿದ್ದರು. ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆದ ಸಂವಾದದಲ್ಲಿ ಕೆಎಸ್‌ಸಿಎಯ ನೂರಾರು ಸದಸ್ಯರು ಭಾಗವಹಿಸಿದ್ದರು.
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಂವಾದದ ಬಳಿಕ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕ್ರಿಕೆಟ್ ಏಳಿಗೆ ಆಗಬೇಕಾದರೆ ಈ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ತಂಡದ ಗೆಲುವು ಅನಿವಾರ್ಯ.
ಈ ಹಿಂದೆ ನಮ್ಮ ಅಧಿಕಾರಾವಧಿಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಎರಡು ಹೆಜ್ಜೆ ಮುಂದೆ ಇತ್ತು. ಈಗ 10 ಹೆಜ್ಜೆ ಹಿಂದೆ ಹೋಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗಬೇಕು, ವೆಂಕಟೇಶ್ ಪ್ರಸಾದ್ ತಂಡ ಅದನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಹಣದ ಕೊರತೆಯಿಲ್ಲ. ಆದರೆ ಕ್ರಿಕೆಟ್ ಬೆಳವಣಿಗೆ ಆಗಬೇಕು. ಈ ಚುನಾವಣೆಯಲ್ಲಿ ಮತ ಕೇವಲ ಕ್ಲಬ್‌ಗೆ ಅಲ್ಲ, ಕ್ರಿಕೆಟ್ ಕನಸು ಹೊಂದಿರುವ ಯುವ ಪ್ರತಿಭೆಗಳಿಗಾಗಿ ಎಂದು ಅನಿಲ್ ಕುಂಬ್ಳೆ ಹೇಳಿದ್ದರು.
ಒಟ್ಟು ಸದಸ್ಯರು-
1,563 ಆಜೀವ ಸದಸ್ಯರು ಹಾಗೂ 348 ಕ್ಲಬ್‌ಗಳ ಸಾಂಸ್ಥಿಕ ಸದಸ್ಯರು ಸೇರಿದಂತೆಒಟ್ಟು 1,911 ಮತಗಳಿವೆ. ಬೆಳಗ್ಗೆ 11 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳಲಿದೆ.
ವೆಂಕಟೇಶ್ ಪ್ರಸಾದ್ ಬಣಕ್ಕೆ ಭರ್ಜರಿ ಗೆಲುವು…
ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ. ಇವರಿಗೆ 749 ಮತಗಳು ಬಂದಿದ್ದರೆ ಇವರ ಪ್ರತಿಸ್ಪರ್ಧಿ ಶಾಂತಕುಮಾರ್ ಗೆ 558 ಮತಗಳು ಬಂದಿದೆ. ವೆಂಕಟೇಶ ಪ್ರಸಾದ್ 191 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.
ಉಪಾಧ್ಯಕ್ಷರಾಗಿ ಸುಜಿತ್ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್, ಖಜಾಂಚಿಯಾಗಿ ಮಧುಕುಮಾರ್ ಆಯ್ಕೆ ಆಗಿದ್ದಾರೆ.

