ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರಸಿದ್ಧ ಭೂವರಾಹನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಭೂ ವರಾಹನಾಥ ಸ್ವಾಮಿ ದೇವಾಲಯಕ್ಕೆ ಪತ್ನಿ ಉಷಾ ಅವರ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ 2 ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆಯ ಭಾಗವಾಗಿ ಹೋಮ ಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದ ಅವರು, ಅಭಿಷೇಕ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹೋಮ–ಹವನ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಾನು ತಿಹಾರ್ ಜೈಲಿನಲ್ಲಿದ್ದಾಗ ನಮ್ಮ ಅತ್ತೆ, ಮಾವ ಈ ದೇವಾಲಯಕ್ಕೆ ಬಂದು 4 ಬಾರಿ ಪ್ರಾರ್ಥನೆ ಸಲ್ಲಿಸಿದ್ದರು. ನನ್ನ ಅನೇಕ ಗೆಳೆಯರು ಕೂಡ ಇಲ್ಲಿಗೆ ಭೇಟಿ ನೀಡು ಎಂದು ಹೇಳುತ್ತಲೇ ಇದ್ದರು. ಇಲ್ಲಿಗೆ ಭೇಟಿ ನೀಡಿದ ನಂತರ ನನಗೆ ಇದರ ಮಹಿಮೆ ಅರ್ಥವಾಯಿತು. ಇದೊಂದು ಅದ್ಭುತ, ಐತಿಹಾಸಿಕ ದೇವಾಲಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ. ಉನ್ನತ ಹುದ್ದೆ ಸಿಗಲಿ ಎಂದು ಹೋಮ ಮಾಡಿದ್ದಾರೆ ಎಂಬ ವಿಚಾರ ಗೊತ್ತಿಲ್ಲ. ಎಲ್ಲ ಹಿರಿಯರು, ಸ್ವಾಮಿಗಳು ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ ಅಷ್ಟೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಎಲ್ಲ ಧರ್ಮಗಳ ಜನರು ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಅದನ್ನು ನೋಡಿ ಖುಷಿ ಎನಿಸಿತು. ಈ ದೇವಾಲಯದ ಪ್ರಾಂಗಣ ಕಟ್ಟಲು ಕೆಲಸ ಮಾಡುತ್ತಿರುವವರು ಮುಸ್ಲಿಮರು. ಈ ದೇವಾಲಯದಲ್ಲಿ ಜಾತಿ, ಧರ್ಮ ಇಲ್ಲ ಎಂದು ಹೇಳಿದರು.

ದೇವರಿಗೆ ಡಿಕೆಶಿ ದಂಪತಿಯಿಂದ ವಿಶೇಷ ಪೂಜೆ, ಅಭಿಷೇಕ: ದೇಗುಲದ ಆಡಳಿತ ಮಂಡಳಿಯಿಂದ ದಂಪತಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಹೋಮ ಕುಂಡಕ್ಕೆ ದಂಪತಿ ಪೂರ್ಣಾಹುತಿ ನೆರವೇರಿಸಿದರು. ಬಳಿಕ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಿ, ಪ್ರಾರ್ಥನೆ ಸಲ್ಲಿಸಿದರು.

