ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ಕಟ್ಟಿ ಬೆಂಗಳೂರು ಅಭಿವೃದ್ಧಿಗೆ ನಾಂದಿ ಹಾಡಿದರು. ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ತನ್ನ ಸ್ವಾರ್ಥ ಮತ್ತು ದುರಾಸೆಗೆ ಬೆಂಗಳೂರು ನಾಶಕ್ಕೆ ಮುಂದಾಗಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ-2024ರ (ಕೆಟಿಸಿಡಿಎ) ಅಡಿ ಇರುವ ಎಲ್ಲಾ ಕೆರೆಗಳಿಗೆ 30 ಮೀಟರ್ ʼಬಫರ್ ಝೂನ್‘ ಎಂಬ ನಿಯಮಕ್ಕೆ ತಿದ್ದುಪಡಿ ತಂದು, ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂರಕ್ಷಿತ ಪ್ರದೇಶವನ್ನು ಕಡಿಮೆ ಮಾಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 202 ಕೆರೆಗಳ ಸಂರಕ್ಷಿತ ಪ್ರದೇಶ (ಬಫರ್ ಝೂನ್ ) ಕಡಿತಕ್ಕೆ ಮುಂದಾಗಿರುವುದು ಕೆರೆಗಳನ್ನು ಮುಚ್ಚುವ ಹುನ್ನಾರ ಅಡಗಿದೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಡಿಕೆಶಿ ಭೂ ಮಾಫಿಯಾಗೆ ಮಣೆಹಾಕಿ ಕೆರೆಗಳು ಹಾಗೂ ಜಲಮೂಲಗಳ ಸರ್ವನಾಶಕ್ಕೆ “ಕೈ” ಹಾಕಿದ್ದಾರೆ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.
ಕೆರೆಗಳನ್ನು ಉಳಿಸಿ, ಸಂರಕ್ಷಿಸಬೇಕಾದ ಸರ್ಕಾರವೇ, ಅದರ ಬಫರ್ ಝೂನ್ ಕಡಿತಗೊಳಿಸಿ ಒತ್ತುವರಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಚಿನ್ನಕ್ಕಿಂತಲೂ ಭೂಮಿಗೆ ಹೆಚ್ಚು ಬೆಲೆಯಿದ್ದು, ಇದೇ ಕಾರಣಕ್ಕೆ ರಿಯಲ್ ಎಸ್ಟೇಟ್ ದಂಧೆಗೆ ಬೆಂಗಳೂರಿನ ಕೆರೆಗಳ ನಿರ್ನಾಮಕ್ಕೆ ಹೊರಟಿದೆ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.

