ಚಂದ್ರವಳ್ಳಿ ನ್ಯೂಸ್, ಮೈಸೂರು:
ಎರಡನೇ ಆಷಾಢ ಶುಕ್ರವಾರದ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ನಟರಾದ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ಧನ್ವೀರ್ ಗೌಡ ಹಾಗೂ ಕುರಿ ಪ್ರತಾಪ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದರು.
ಆಷಾಢ ಮಾಸದಲ್ಲಿ ಶಕ್ತಿ ಸ್ವರೂಪಿಣಿಯಾದ ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆಯಲು ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದಾರೆ.
ಚಾಮುಂಡಿ ಬೆಟ್ಟದ ಬಳಭಾಗದಲ್ಲಿ ವಿವಿಧ ಬಗೆಯ ಹೂವುಗಳು ಹಾಗೂ ಹಣ್ಣುಗಳಿಂದ ದೇವಿಗೆ ಅಲಂಕಾರ ಮಾಡಿರುವುದು ವಿಶೇಷ ಆಕರ್ಷಣೆಯಾಗಿತ್ತು.
ಶಕ್ತಿದೇವಿಗೆ ಅಲಂಕಾರ:
ಆಷಾಢ ಮಾಸದಲ್ಲಿ ಶಕ್ತಿದೇವತೆ ಆರಾಧನೆ, ಶ್ರಾವಣ ಮಾಸದಲ್ಲಿ ವಿಷ್ಣು ದೇವರ ಆರಾಧನೆ ಹಾಗೂ ಕಾರ್ತಿಕ ಮಾಸದಲ್ಲಿ ಶಿವನ ಅರಾಧನೆ ಮಾಡುವುದು ವಿಶೇಷ. ಆಷಾಢ ಮಾಸದ ಎರಡನೇ ಶುಕ್ರವಾರ ಶಕ್ತಿದೇವಿಗೆ ವಿಜಯಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.
ಬೆಳಗಿನ ಜಾವ 3 ಗಂಟೆಯಿಂದಲೇ ಚಾಮುಂಡೇಶ್ವರಿ ತಾಯಿಯ ಮೂಲ ವಿಗ್ರಹಕ್ಕೆ ಅಭಿಷೇಕ, ಅರ್ಚನೆ, ಅಲಂಕಾರ ಮಾಡಿ, ಮಂಗಳಾರತಿ ಮಾಡಿ, ನಂತರ 5.30 ರಿಂದ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 9.30ಕ್ಕೆ ಮಹಾಮಂಗಳಾರತಿ ಮಾಡಿ ನಂತರ ರಾತ್ರಿ 10 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಸಿನಿಮಾ ಹಾಗೂ ರಾಜಕೀಯ ಪಕ್ಷಗಳ ಗಣ್ಯರು, ಸಚಿವರು ಭೇಟಿ ನೀಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪತ್ನಿ ಜೊತೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸರ್ವರ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಸಚಿವ ಚಲುವರಾಯ ಸ್ವಾಮಿ ಅವರು ಕೂಡ ಪತ್ನಿ ಜೊತೆ ಆಗಮಿಸಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚಾಮುಂಡಿ ತಾಯಿಯ ಪರಮಭಕ್ತರಾಗಿರುವ ನಟ ದರ್ಶನ್ ಅವರು ಕೂಡ ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನಟರಾದ ಚಿಕ್ಕಣ್ಣ, ಧನ್ವೀರ್ ಗೌಡ ಹಾಗೂ ಕುರಿ ಪ್ರತಾಪ್ ಅವರು ಜೊತೆಗೆ ಆಗಮಿಸಿ ದೇವಿಯ ದರ್ಶನ ಪಡೆದರು. ನಟ ಡಾಲಿ ಧನಂಜಯ್ ಅವರು ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನ ಪಡೆದರು.