ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌ಡಿಸಿಎಂ ಡಿಕೆ ಶಿವಕುಮಾರ್ ಅವರೇ “ನಮ್ಮ ನೀರು, ನಮ್ಮ ಹಕ್ಕು” – ಮೇಕೆದಾಟು ಅಣೆಕಟ್ಟೆ ಕಟ್ಟುತ್ತೇವೆ ಎಂದು ಢೋಂಗಿ ಪಾದಯಾತ್ರೆ ಮೂಲಕ ರಾಜ್ಯದ ಜನರ ಕಿವಿಗೆ ಹೂ ಮುಡಿಸಿದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಅಲ್ಲವೇ ? ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ತಮಿಳುನಾಡಿನ ಡಿಎಂಕೆ ಸರ್ಕಾರ ಮೇಕೆದಾಟು ಆಣೆಕಟ್ಟು ಕಟ್ಟಲು ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುತ್ತಿದೆ. ಆದರೆ, ಈಗ ಮೇಕೆದಾಟಿಗೆ ಕೇಂದ್ರ ಸರ್ಕಾರದಿಂದ ಸಹಿ ಹಾಕಿಸಿಕೊಡುವಂತೆ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೇಗೌಡರನ್ನು ಕೇಳುತ್ತಿರುವುದು ಯಾವ ನ್ಯಾಯ ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಮೇಕೆದಾಟು ಯೋಜನೆಗೆ ಸದಾ ಅಡ್ಡಗಾಲು ಹಾಕುತ್ತಿರುವ ಇಂಡಿ ಮೈತ್ರಿಕೂಟದ ಮಿತ್ರಪಕ್ಷ ಡಿಎಂಕೆ ಸರ್ಕಾರವನ್ನು ಮೊದಲು ಒಪ್ಪಿಸುವ ತಾಕತ್ತು, ಎದೆಗಾರಿಕೆ ನಿಮ್ಮಲ್ಲಿ ಇದೆಯೇ ತೋರಿಸಿ ಮಿಸ್ಟರ್‌ಡಿ.ಕೆ.ಶಿವಕುಮಾರ್ ಎಂದು ಜೆಡಿಎಸ್ ಸವಾಲ್ ಹಾಕಿದೆ.
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ಹಾಗೂ ದ್ವೇಷ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ, ಹೆಚ್‌ಎಂಟಿ ಮತ್ತು ಕೆಐಒಸಿಎಲ್‌ಸಂಸ್ಥೆ ಪುನಶ್ಚೇತನಕ್ಕೆ ಸಹಕಾರ ನೀಡದೆ ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸಲು ಶ್ರಮಿಸುತ್ತಿರುವ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ, ಅಸಹಕಾರ ನೀಡುತ್ತಿರುವ ಕಾಂಗ್ರೆಸ್‌ಸರ್ಕಾರದ ಹಠಮಾರಿತನದಿಂದ ಹೆಚ್‌ಎಂಟಿ, ಕುದುರೆಮುಖ ಸಂಸ್ಥೆಯ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ಈಗಲಾದರೂ ಒಣ ಪ್ರತಿಷ್ಠೆ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಸಹಕರಿಸಿ, ಕರ್ನಾಟಕದ ಅಭಿವೃದ್ಧಿಗೆ ಮೊದಲು ಆದ್ಯತೆ ಕೊಡಿ. ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ವಿಚಾರದಲ್ಲಿ ಹೆಚ್.ಡಿ. ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿಯವರು ಹಾಗೂ ಜೆಡಿಎಸ್ ಪಕ್ಷ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಜೆಡಿಎಸ್ ತಿಳಿಸಿದೆ.