ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೊಳೆಗೇರಿಯ ಎಷ್ಟೋ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಅಂತಹ ಜನರಿಗೆ ಕಡಿಮೆ ಬೆಲೆಯಲ್ಲಿ ಮನೆ ನಿರ್ಮಿಸಲು ರಾಜ್ಯ ಸರ್ಕಾರಗಳ ಬಳಿ ಹಣವಿಲ್ಲ. ಅಂಥಹದರಲ್ಲಿ ನೀವು ಸೈಕಲ್(ಸೈಕ್ಲಿಂಗ್) ಟ್ರ್ಯಾಕ್ಗಳನ್ನು ನಿರ್ಮಿಸುವ ಬಗ್ಗೆ ಹಗಲುಗನಸು ಕಾಣುತ್ತೀರಲ್ಲ? ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನೆ ಮಾಡಿತು.
ದೇಶಾದ್ಯಂತ ಸೈಕ್ಲಿಂಗ್ ಟ್ರ್ಯಾಕ್ಗಳನ್ನು ನಿರ್ಮಿಸಬೇಕೆಂದು ಕೋರಿ ಸೈಕ್ಲಿಂಗ್ ಪ್ರವರ್ತಕ ದವೀಂದರ್ ಸಿಂಗ್ ನಾಗಿ ಎಂಬವರು ನ್ಯಾಯಾಲಯಕ್ಕೆ ಪಿಐಎಲ್ ಅರ್ಜಿ ಸಲ್ಲಿಸಿದ್ದು ಆ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಅರ್ಜಿದಾರರಿಗೆ ಪ್ರಶ್ನಿಸಿತು.
ದೇಶಾದ್ಯಂತ ಪ್ರತ್ಯೇಕ ಸೈಕಲ್ ಟ್ರ್ಯಾಕ್ಗಳನ್ನು ನಿರ್ಮಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠವು, ದೇಶದ ಮುಂದಿರುವ ಆದ್ಯತೆಗಳೇನು ಎಂಬುದನ್ನು ಅರ್ಜಿದಾರರು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಸೈಕಲ್ ಟ್ರ್ಯಾಕ್ಗಿಂತಲೂ ಪ್ರಮುಖ ತುರ್ತು ವಿಷಯಗಳು ದೇಶದ ಮುಂದಿದ್ದು, ಅವುಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಕೋರ್ಟ್ ತಾಕೀತು ಮಾಡಿತು.
ದೇಶಾದ್ಯಂತ ಇರುವ ಕೊಳೆಗೇರಿಗಳಲ್ಲಿ ಜನರು ಎಂಥ ಸ್ಥಿತಿಯಲ್ಲಿ ವಾಸಿ ಮಾಡುತ್ತಿದ್ದಾರೆ ಎಂಬುದನ್ನು ಅಲ್ಲಿಗೆ ಹೋಗಿ ನೋಡಿ. ಇವರಿಗೆ ಮನೆಗಳನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ನೀವು ಸೈಕಲ್ ಟ್ರ್ಯಾಕ್ಗಳ ಬಗ್ಗೆ ಹಗಲುಗನಸು ಕಾಣುತ್ತಿರುವಿರಲ್ಲ. ಜನರಿಗೆ ಮೂಲಭೂತ ಸೌಕರ್ಯಗಳು ಬೇಕಿವೆ, ಅದನ್ನು ಬಿಟ್ಟು ನೀವು ಸೈಕಲ್ ಟ್ರ್ಯಾಕ್ಗಳ ಬಗ್ಗೆ ಮಾತನಾಡುತ್ತಿರುವಿರಿ ಎಂದು ನ್ಯಾಯಾಲಯ ಹೇಳಿತು.
ನಮ್ಮ ಆದ್ಯತೆಗಳು ತಪ್ಪಾಗುತ್ತಿವೆ. ನಾವು ನಮ್ಮ ಆದ್ಯತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ಅನುಚ್ಛೇದ 21ರ ಬಗ್ಗೆ ನಾವು ತಿಳಿಯಬೇಕಿದೆ. ಜನರಿಗೆ ಕುಡಿಯಲು ಶುದ್ಧ ನೀರು ಇಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಅಂಥದ್ದರಲ್ಲಿ ನಿಮಗೆ ಸೈಕಲ್ ಟ್ರ್ಯಾಕ್ ಬೇಕೇ? ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಪ್ರಶ್ನಿಸಿತು.