ಚಂದ್ರವಳ್ಳಿ ನ್ಯೂಸ್, ಅಹ್ಮದಾಬಾದ್:
ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ಅವರ ಜೀವ ಉಳಿಸಿದ್ದು ಸೀಟ್ ಸಂಖ್ಯೆ 11A.
ಈ ಸೀಟ್ ಸಂಖ್ಯೆ ಯಾರಿಗೂ ಬೇಡವಾಗಿದ್ದು ಅಚ್ಚರಿಯಾದರೂ ಸತ್ಯ.. ಗುಜರಾತ್ನ ಅಹಮದಾಬಾದ್‌ನಿಂದ ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ವಿಮಾನದಲ್ಲಿದ್ದು ಲಂಡನ್ ಕಡೆಗೆ ಪ್ರಯಾಣ ಬೆಳೆಸಿದ್ದರು.
ವಿಮಾನ ಪತನದಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾ ದೇಶದ ಪ್ರಯಾಣಿಕ ಇದ್ದರು.
ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ರಮೇಶ್ ವಿಶ್ವಾಸ್ ಕುಮಾರ್ ಮಾತ್ರ ಬದುಕುಳಿದಿದ್ದು ಅವರ ಪ್ರಾಣ ಉಳಿಯಲು ಸೀಟ್ ನಂಬರ್ 11A ಕಾರಣ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ರಮೇಶ್ ಬ್ರಿಟಿಷ್ ಪ್ರಜೆ. ಸೀಟ್ ಸಂಖ್ಯೆ 11A ನಲ್ಲಿ ಆತ ಕೂತು ಪ್ರಯಾಣ ಬೆಳೆಸಿದ್ದರು. ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು.
ಹೆಣದ ರಾಶಿ-
ವಿಮಾನ ಅಪಘಾತದಲ್ಲಿ ಬದುಕುಳಿದ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ, ದೊಡ್ಡ ಸ್ಫೋಟ ಸಂಭವಿಸಿತು. ವಿಮಾನ ಗಾಳಿಯಲ್ಲಿ ಸುತ್ತಿ ನಂತರ ಅಪ್ಪಳಿಸಿತು. ನಾನು ಕಣ್ಣು ತೆರೆದಾಗ, ಸುತ್ತಲೂ ಶವಗಳು ಮತ್ತು ಅವಶೇಷಗಳು ಇದ್ದವು. ನಾನು ಭಯಭೀತನಾಗಿದ್ದೆ, ಆದರೆ ಹೇಗೋ ಸೀಟಿನಿಂದ ಎದ್ದು ಉರಿಯುತ್ತಿರುವ ಅವಶೇಷಗಳಿಂದ ಹೊರಗೆ ಓಡಿಹೋದೆ. ಈ ವೇಳೆ ಮುಖ ಮತ್ತು ಕಾಲುಗಳ ಮೇಲೆ ಗಂಭೀರ ಗಾಯಗಳಾಗಿದ್ದರೂ, ನಾನು ಕುಂಟುತ್ತಾ ಸ್ಥಳದಿಂದ ಹೊರಬಂದೆ ಎಂದು ತಿಳಿಸಿದರು.
11A ಸೀಟು ವಿಶ್ವಾಸ್ ಕುಮಾರ್ ರಮೇಶ್ ಅವರ ಜೀವನಾಡಿಯಾಯಿತು. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ, ಡ್ರೀಮ್ ಲೈನರ್ ವಿಮಾನ ಪತನವಾಗಿ ಛಿದ್ರವಾಯಿತು. ಟೇಕ್ ಆಫ್ ಆದ ಕೇವಲ 30 ಸೆಕೆಂಡುಗಳ ನಂತರ ಎಂಜಿನ್ ದೋಷ ಅವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಗಾಳಿಯಲ್ಲಿ ಎಂದಿಗೂ ತೆರೆಯದಂತೆ ವಿನ್ಯಾಸಗೊಳಿಸಲಾದ ಬಾಗಿಲುಗಳು ದುರಂತದ ಬಳಿಕ ನೆಲದ ಮೇಲೆ ಕಾರ್ಯ ನಿರ್ವಹಿಸಬಹುದಾದ ಅವಶೇಷಗಳಾದವು. ಅಪಘಾತದ ಬಳಿಕ ಇದೇ ಸೀಟ್ ಬಳಿ ಇದ್ದ ತುರ್ತು ಬಾಗಿಲು ಸ್ಫೋಟದಿಂದ ರಮೇಶ್ ವಿಶ್ವಾಸ್ ಕುಮಾರ್ ರನ್ನು ರಕ್ಷಿಸಿದೆ.
ಸಾಮಾನ್ಯವಾಗಿ ಹಾರಾಟದ ಸಂದರ್ಭದಲ್ಲಿ ತುರ್ತು ನಿರ್ಗಮನಗಳು ತೆರೆಯುವುದಿಲ್ಲ. ಕ್ಯಾಬಿನ್ ಒತ್ತಡ ಮತ್ತು ಇಂಟರ್‌ಲಾಕ್‌ಗಳು ಅದನ್ನು ಅಸಾಧ್ಯವಾಗಿಸುತ್ತದೆ. ಆದರೆ ಉಕ್ಕು ಮತ್ತು ರಚನೆ ಮುರಿದಾಗ, ಅದೇ ನಿರ್ಗಮನಗಳು ತಪ್ಪಿಸಿಕೊಳ್ಳುವ ಮಾರ್ಗಗಳಾಗಿ ರೂಪಾಂತರಗೊಳ್ಳುತ್ತವೆ. ಬಾಗಿಲಿನಿಂದ ಕೇವಲ ಒಂದು ಮೀಟರ್ ದೂರದಲ್ಲಿ ಇದು ತೆರೆಯಲ್ಪಟ್ಟಿತು. ಇದೇ 11A ಸೀಟು ರಮೇಶ್ ಬದುಕುಳಿಯಲು ಒಂದು ರೀತಿಯಲ್ಲಿ ನೆರವಾಯಿತು ಎಂದು ಹೇಳಲಾಗಿದೆ.ಯಾರಿಗೂ ಬೇಡವಾದ 11A ಸೀಟ್.
ಸಾಮಾನ್ಯವಾಗಿ ಬಹುತೇಕ ಎಲ್ಲ ಪ್ರಯಾಣಿಕ ಬೋಯಿಂಗ್ ವಿಮಾನಗಳಲ್ಲಿ ಈ 11A ಸೀಟ್ ತುರ್ತು ನಿರ್ಗಮನದ ಬಾಗಿಲಿನ ಬಳಿ ಇರುತ್ತದೆ. ಹೀಗಾಗಿ ತುರ್ತು ನಿರ್ಗಮನ ಬಾಗಿಲಿಗೆ ವಿಂಡೋ ಅಥವಾ ಕಿಟಕಿ ಇರುವುದಿಲ್ಲ. ಹೀಗಾಗಿ ಬಹುತೇಕ ಪ್ರಯಾಣಿಕರು ಈ ಸೀಟ್ ಬುಕ್ ಮಾಡಲು ಹಿಂಜರಿಯುತ್ತಾರೆ. ಪ್ರಯಾಣದ ಆನಂದ ಅನುಭವಿಸಲು ಮತ್ತು ಹೊರದಿನ ಪ್ರಕೃತಿ ಸೌಂದರ್ಯ ಸವಿಯಲು ವಿಂಡೋ ಸೀಟ್ ಗಳನ್ನೇ ಹೆಚ್ಚಾಗಿ ಬುಕ್ ಮಾಡುತ್ತಾರೆ. ಆದರೆ ಈ ಬಾರಿ ರಮೇಶ್ ವಿಶ್ವಾಸ್ ಕುಮಾರ್ ಈ ಸೀಟ್ ಕುಳಿತಿದ್ದರು. ಇದೀಗ ಇದೇ ಸೀಟ್ ಅವರ ಪ್ರಾಣ ರಕ್ಷಣೆಗೆ ಪರೋಕ್ಷವಾಗಿ ನೆರವಾಗಿದೆ.
ತುರ್ತು ನಿರ್ಗಮನದ ತರಬೇತಿ ನೀಡಿದ್ದ ಸಿಬ್ಬಂದಿ–
ವಿಮಾನ ದುರಂತಕ್ಕೀಡಾದರೆ 90 ಸೆಕೆಂಡ್ ಗಳಲ್ಲಿ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರಗೆ ಬರುವ ವಿಧಾನವನ್ನು ಸಿಬ್ಬಂದಿ ಪ್ರಯಾಣಿಕರಿಗೆ ಸೂಚನೆ ನೀಡಿದ್ದರು. ಈ ಸೂಚನೆಗಳು ರಮೇಶ್ ವಿಶ್ವಾಸ್ ಕುಮಾರ್ ನೆರವಿಗೆ ಬಂದಿದ್ದು, ಅಪಘಾತದ ಬಳಿಕ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ರಮೇಶ್ ಅವಶೇಷಗಳಿಂದ ಹೊರಬರುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.