ಚಂದ್ರವಳ್ಳಿ ನ್ಯೂಸ್, ತುಮಕೂರು:
ಶೈಕ್ಷಣಿಕ ನಗರ ಎಂದು ಪ್ರಸಿದ್ಧಿಯಾಗಿರುವ ತುಮಕೂರು ಜಿಲ್ಲೆಯಲ್ಲಿ ಏಳು ಇಂಜಿನಿಯರಿಂಗ್ ಕಾಲೇಜು, ಮೂರು ಮೆಡಿಕಲ್ ಕಾಲೇಜುಗಳು, ಸುಮಾರು ಐಟಿಐ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಹಾಗೂ ತುಮಕೂರು ಯೂನಿವರ್ಸಿಟಿ ಇದ್ದು, ಸುಮಾರು 50 ರಿಂದ 60 ಸಾವಿರ ಜನರು ತುಮಕೂರಿನಿಂದ ಬೆಂಗಳೂರಿಗೆ ವಿವಿಧ ಐಟಿ ಕಂಪೆನಿಗಳಿಗೆ ಕೆಲಸಕ್ಕೆ ಹೋಗುತ್ತಿರುವುದರಿಂದ ತುಮಕೂರಿನಲ್ಲೇ ಐಟಿ ಹಬ್ ನಿರ್ಮಾಣ ಮಾಡುವ ಸಂಬಂಧ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಟಿ.ಜೆ. ಗಿರೀಶ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ತುಮಕೂರು ಪ್ರಮುಖ ಇಪ್ಪತ್ತು ಜಿಲ್ಲೆಗಳಿಗೆ ಹಾದುಹೋಗುವ ಹೆಬ್ಬಾಗಿಲಾಗಿದ್ದು, ಏಷ್ಯಾ ಖಂಡದಲ್ಲಿಯೆ ಅತಿ ದೊಡ್ಡ ಕೈಗಾರಿಕಾ ಪ್ರದೇಶವನ್ನು ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕು ಎಂದು ಕೋರಿದ್ದಾರೆ.
ಮಹಾನಗರ ಪಾಲಿಕೆಯ ಸರಹದ್ದಿನಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆಯನ್ನು ಪ್ರತ್ಯೇಕ ಕೈಗಾರಿಕಾ ವರ್ಗ ಮಾಡಿ ಕಮರ್ಷಿಯಲ್ ಹಾಗೂ ರೆಸಿಡೆನ್ಷಿಯಲ್ ಸ್ಲಾಬ್ ಗಿಂತ ಕಡಿಮೆ ಮಾಡುವ ಬೇಡಿಕೆಯು ಸರ್ಕಾರದ ಮುಂದಿದ್ದು, ಕೆಐಎಡಿಬಿಯಿಂದ ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿಕೊಂಡು ನಂತರ ಪ್ರತ್ಯೇಕ ಕೈಗಾರಿಕಾ ವರ್ಗ ಮಾಡಿ ಕಮರ್ಷಿಯಲ್ ಹಾಗೂ ರೆಸಿಡೆನ್ಷಿಯಲ್ ಸ್ಲಾಬ್ ಗಿಂತ ಆಸ್ತಿ ತೆರಿಗೆಯನ್ನು ಕಡಿಮೆ ಮಾಡಿ ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆಯಂತೆ ನಗರ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ತೆರಿಗೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗುವಂತೆ ಪ್ರಮುಖವಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಪ್ರತ್ಯೇಕವಾದ ಕೆಐಎಡಿಬಿ ಕಚೇರಿ, ಇಎಸ್ಐ ಆಸ್ಪತ್ರೆಯ ನಿರ್ಮಾಣ, ಅಗ್ನಿಶಾಮಕ ಠಾಣೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ, ಬೆಸ್ಕಾಂ ಮುಖ್ಯ ಕಚೇರಿ, ಬ್ಯಾಂಕ್‌ಗಳ ಸ್ಥಾಪನೆ ಸೇರಿದಂತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಹಾಗೂ ಉಚಿತ ಆರೋಗ್ಯ ವಿಮೆ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ತಮ್ಮ ಜೀವಿತ ಅವಧಿಯಲ್ಲಿ ಸರ್ಕಾರಕ್ಕೆ ಎಲ್ಲಾ ಬಗ್ಗೆಯ ತೆರಿಗೆಗಳನ್ನು ಕಟ್ಟುತ್ತಾ ಬಂದಿದ್ದು, ಇವರಿಗೆ 60 ವರ್ಷದ ನಂತರ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಅವರು ಮುಖ್ಯಮಂತ್ರಿಗಳಿಗೆ ಕೋರಿದ್ದಾರೆ.