ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅಬಕಾರಿ ಇಲಾಖೆಗೆ ವರ್ಗಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಬರೆದಿರುವ ಪತ್ರ ವೈರಲ್ ಆಗಿದ್ದು ಈಗ ಆ ಪತ್ರ ವಿವಾದವಾಗಿ ಮಾರ್ಪಟ್ಟಿದೆ. ನೇಮಕಾತಿ ನಿಯಮಾವಳಿಗಳನ್ನು ಗಾಳಿಗೆ ತೂರಿ, ಆರೋಗ್ಯ ಇಲಾಖೆಯ ಡಿಎಚ್ಓ ಮೋಹನ್ ಅವರನ್ನು ಅಬಕಾರಿ ಉಪ ಆಯುಕ್ತರನ್ನಾಗಿ ನೇಮಿಸಲು ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಿರುವ ಪತ್ರದ ಬಗ್ಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಿಎಂ ಸ್ಪಷ್ಟನೆಗೆ ಬಿಜೆಪಿ ಪಟ್ಟು-
ವೈರಲ್ ಆಗಿರುವ ಮುಖ್ಯಮಂತ್ರಿಗಳದ್ದು ಎನ್ನಲಾದ ಶಿಫಾರಸ್ಸು ಪತ್ರದಲ್ಲಿ ಪತ್ರದ ಸಂಖ್ಯೆಯಾಗಲಿ ಅಥವಾ ದಿನಾಂಕವಾಗಲಿ ನಮೂದಾಗಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರ ಸಹಿ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ವರ್ಗಾವಣೆ ದಂಧೆಯ ಹಿಂದೆ ಕುಟುಂಬದ ವ್ಯಕ್ತಿಯೊಬ್ಬರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮಾಡಿದ್ದು, ಸಿಎಂ ಈ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.
ಎಣ್ಣೆ ಮಾರೋಕೆ ಡಾಕ್ಟರ್ ಯಾಕೆ?’
ಮಾಜಿ ಸಚಿವ ಸುನಿಲ್ ಕುಮಾರ್ ಅವರು ಸಿಎಂ ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, ವರ್ಗಾವಣೆ ದಂಧೆಯಲ್ಲಿ ಎಲ್ಲಾ ಇಲಾಖೆಗಳು ಮುಳುಗಿವೆ. ಸರ್ಕಾರದ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ಹಾಕುವುದು ಅತ್ಯಂತ ಅನುಚಿತ. ಇದು ತುಘಲಕ್ ದರ್ಬಾರ್ ಎಂದು ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಅಭಯ್ ಪಾಟೀಲ್, ಸಾರಾಯಿ ಮಾರೋಕೆ ಡಾಕ್ಟರ್ ಯಾಕೆ? ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಸಿಎಂಗೆ ಅರಳು ಮರಳಾಗಿದ್ದು, ಚಿಕಿತ್ಸೆಯ ಅಗತ್ಯವಿದೆ ಎಂದು ಲೇವಡಿ ಮಾಡಿದ್ದಾರೆ.
ಆರೋಗ್ಯ ಸಚಿವರ ಸ್ಪಷ್ಟನೆ:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾತನಾಡಿ, ವರ್ಗಾವಣೆ ಪತ್ರ ಅಧಿಕೃತವೋ? ಅಲ್ಲವೋ? ಎಂಬುದು ತಮಗೆ ತಿಳಿದಿಲ್ಲ. ಆದರೆ ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಹೋಗಲು ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರು ಕೇವಲ ಟ್ವೀಟ್ ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಚರ್ಚೆಯಾಗಬಾರದು ಎಂಬುದು ಅವರ ಉದ್ದೇಶ ಎಂದು ತಿರುಗೇಟು ನೀಡಿದ್ದಾರೆ.

