ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಾಯಿಗಳು ..ಸಾರ್
ನಾವು…ನಾಯಿಗಳು
ನೀವು
ಮಲಗಿದಾಗ
ನಾ ಎಚ್ಚರವಾಗಿರುವೆ
ನಿಮ್ಮ ಧನ ಕನಕಗಳ
ಎವೆ ಇಕ್ಕದೆ ಕಾಯುವೆ
ಹಸಿವೆಯ ಹಂಗು ತೊರೆದು
ಕೊಟ್ಟಾಗ ತಿಂದು
ಮನೆ ಸುತ್ತಾ
ಗಸ್ತು ಹೊಡೆದು
ಹಗಲ ಹೊಂಗೆ ತಂಪಿಗೆ
ಗೋಡೆ ಮಗ್ಗುಲಲಿ
ಪವಡಿಸಿ
ಬಂದು ಹೋಗುವವರ
ವಾಚ್ ಮಾಡುವೆ
ಸಂಬಳ ಪಡೆಯದ
ಯೂನಿಫಾರ್ಮ್
ಇಲ್ಲದ ಸೆಕ್ಯೂರೀಟಿಯಂತೆ
ಬೊಗಳುತ್ತಲೇ ಬೆದರಿಸಿ
ಅಪರಿಚಿತರಿಗೆ
ನೀವು ಪರ್ಮಿಟ್ ಕೊಟ್ಟರಷ್ಟೇ ಒಳ ಬಿಡುವೆ
ಆಗೊಮ್ಮೆ ಈಗೊಮ್ಮೆ
ತೂಕಡಿಸಿ
ಕತ್ತಲಿಗಾಗಿ ಕಾದಿದ್ದು
ಭಕ್ಷೀಸು ಪಡೆದರೂ
ಡ್ಯೂಟಿಯೇ ಮಾಡದ
ಗುರ್ಖಾನ ಶಪಿಸುವೆ
ಹಬ್ಬ ಹರಿದಿನಗಳಲಿ
ಉಳಿಸಿ ಒಗೆದ ಎಂಜಲು ಮೃಷ್ಟಾನ್ನದ ಬಾಳೆಲೆ
ಸ್ವಚಗೊಳಿಸುವೆ
ಹಾಗೆ ಒಮ್ಮೆ ಹುಸೇನ್ ಸಾಹೇಬರು
ಎನ್ಕೌಂಟರ್ ಮಾಡಿದ್ದ
ಕುರಿ ಮಾಂಸದ ತುಂಡು ಚಪ್ಪರಿಸಿದ ನೆನಪು
ಕಾಡಿ ಮರುಗುವೆ
ಎದುರು ಮನೆ
ಕಾಂಪೌಂಡ್ ಒಳಗಡೆ
ಕುಂತುಂಡು ಕರಡಿಯಂತೆ
ಬೆಳೆದ ಮಿತ್ರ ನನ್ನನ್ನೇ
ಗುರಾಯಿಸುತ್ತಾನೆ
ಕಂಡದ್ದು ತಿನ್ನಲು
ಸ್ವಾತಂತ್ರ್ಯವಿಲ್ಲ
ಬಂದಿಖಾನೆಯಲ್ಲಿದ್ದು
ಯಜಮಾನರ ವಾಕಿಂಗ್ ಗೆ
ಜೊತೆಯಾಗಿ ಕಕ್ಕ ಮಾಡಿ
ಗೂಡ ಸೇರುವ ಮಡಿವಂತ
ವ್ಯತ್ಯಾಸವಿಷ್ಟೇ
ಅವ ಕಾಣೆಯಾದರೆ
ಕೊಡುವರು ಕಂಪ್ಲೇಂಟ್
ನನಗೋ ಹುಡುಕುವವರೆ ಇಲ್ಲ….ಆದರೂ
ಜನ ಹೆದರುವುದು
ನಮ್ಮ ಯುನಿಯನ್ಗೆ
ನಾಯಿಗಳು… ಸಾರ್
ನಾವು….ನಾಯಿಗಳು
ರಚನೆ : ಗುರಾನಿ
ಜಿ ಆರ್ ನಿಂಗೋಜಿ ರಾವ್
ದಾವಣಗೆರೆ, ಮೋ 9036389240