ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಬೃಹತ್ ಉಚಿತ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಅಂದತ್ವ ನಿವಾರಣ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಶಂಕರ ಕಣ್ಣಿನ ಆಸ್ಪತ್ರೆ, ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶಿಬಿರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣು ಪ್ರಸಾದ್ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಹೆಚ್‌ಒ ಡಾ.ರೇಣು ಪ್ರಸಾದ್, ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಿದ್ದಂತೆ ಅದರ ರಕ್ಷಣೆ ಅಮೂಲ್ಯವಾದದ್ದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ನೇತೃ ತಪಾಸಣೆ ಚಿಕಿತ್ಸಾ ಶಿಬಿರವು ಕೇವಲ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿ ತಿಂಗಳು ಆಯ್ದ ಗ್ರಾಮಗಳಲ್ಲಿ ಶಿಬಿರ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಪ್ರಧಾನವಾದ ಇಂದ್ರಿಯ ಕಣ್ಣು. ಕಣ್ಣುಗಳನ್ನು ದಾನ ಮಾಡುವವರು ಮುಂದೆ ಬನ್ನಿ ಅಂದತ್ವ ನಿವಾರಣೆಗಾಗಿ ಎಲ್ಲರೂ ಕೈ ಜೋಡಿಸಿ ಎಂದು ತಿಳಿಸಿದ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಈ ವರ್ಷ 1200 ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಿ ಉಚಿತವಾಗಿ ಕನ್ನಡಕಗಳನ್ನು ವಿವರಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಡಾ.ಜಿ.ಓ.ನಾಗರಾಜ್ ಅವರು ಜಿಲ್ಲೆಯಲ್ಲಿ ಅಂಧತ್ವ ನಿಯಂತ್ರಣ ಕಾರ್ಯಕ್ರಮಕ್ಕೆ ತೆಗೆದುಕೊಂಡು ಯೋಜನೆ ಅನುಷ್ಠಾನದ ಬಗ್ಗೆ, ಆಶಾಕಿರಣ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಶಿಬಿರದಲ್ಲಿ 219 ಜನರ ತಪಾಸಣೆ ನಡೆಸಲಾಯಿತು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ 52 ಅರ್ಹ ಫಲಾನುಭವಿಗಳು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್, ವಾಣಿಜ್ಯೋದ್ಯಮಿ ಬಾಬಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶಪ್ಪ, ಉಪಾಧ್ಯಕ್ಷೆ ನಾಗಮ್ಮ, ಪಿ.ಡಿ.ಓ. ಮಂಜುಳ, ಶಂಕರ್ ಶಸ್ಪತ್ರೆ ಡಾ.ರವಿಕಿರಣ್, ಜಿಲ್ಲಾ ಆಯುಷ್ ಅಧಿಕಾರಿ ಚಂದ್ರಕಾಂತ ನಾಗಸಮುದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ನೇತ್ರಾಧಿಕಾರಿ ರಾಮು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ, ಬಿ.ಜಾನಕಿ ಸೇರಿದಂತೆ ಮತ್ತಿತರರು ಇದ್ದರು.