ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕರಿಗೆ ವಾಹನಗಳ ಟೋಯಿಂಗ್ ಮಾಡುವುದರಿಂದ ತೊಂದರೆಯಾಗುವುದಾದರೆ ಜಾರಿಗೊಳಿಸುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಸ್ತೆ ಬದಿ ನಿಲ್ಲುವ ವಾಹನಗಳ ಟೋಯಿಂಗ್ ಮಾಡುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಾಹನಗಳ ಟೋಯಿಂಗ್ ಬಗ್ಗೆಯೂ ಚರ್ಚೆ ಆಗಿದೆ. ಇದನ್ನು ಈ ಹಿಂದೆ ನನ್ನ ಗಮನಕ್ಕೆ ತರಲಾಗಿದೆ. ಟೋಯಿಂಗ್ ಸಾರ್ವಜನಿಕರಿಗೆ ಉಪಯೋಗ ಆದರೆ ಜಾರಿಗೆ ತರುತ್ತೇವೆ. ಅದು ಸಾರ್ವಜನಿಕರಿಗೆ ತೊಂದರೆ ಆದರೆ ಜಾರಿಗೊಳಿಸಲ್ಲ. ಏನೇ ನಿರ್ಧಾರ ಮಾಡಿದರೂ ಸಾರ್ವಜನಿಕರಿಗೆ ಉಪಯೋಗ ಆಗಬೇಕು. ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ ತಗೆದುಕೊಳ್ಳುತ್ತೇವೆ. ಸಾರ್ವಜನಿಕರಿಗೆ ನಮ್ಮ ಕ್ರಮದಿಂದ ಒಳ್ಳೆಯದಾಗಬೇಕೇ ಹೊರತು ಕೆಟ್ಟದಾಗಬಾರದು ಎಂದು ಪರಮೇಶ್ವರ್ ತಿಳಿಸಿದರು.
ಮಂಡ್ಯದಲ್ಲಿ ನಡೆದಿರುವ ಘಟನೆ ತಲೆ ತಗ್ಗಿಸುವಂಥದ್ದು. ಇಂತಹ ಘಟನೆಗಳು ಆಗದಂತೆ ಕ್ರಮ ವಹಿಸುತ್ತೇವೆ. ಈಗಾಗಲೇ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇವತ್ತು ಸಭೆ ಕರೆದಿದ್ದೇನೆ, ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಮಂಡ್ಯ ಟ್ರಾಫಿಕ್ ಪೊಲೀಸರು ಮಾನವೀಯತೆ ತೋರಲಿಲ್ಲ. ಸ್ವಂತಿಕೆ ಪ್ರದರ್ಶಿಸಲಿಲ್ಲ. ಆ ಘಟನೆ ದುರಾದೃಷ್ಟಕರ. ಘಟನೆ ನಡೆಯಬಾರದಿತ್ತು. ಪೊಲೀಸರು ಪೋಷಕರ ಜತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಈ ತರ ನಡೆದುಕೊಳ್ಳದಂತೆ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯೋದು ಬೇಡ ಎಂದು ತಿಳಿಸಿದರು.
ಎಲ್ಲೋ ಮೂಲೆಯಲ್ಲಿ ನಿಂತು ಏಕಾಏಕಿ ಬಂದು ವಾಹನಗಳನ್ನು ಪೊಲೀಸರು ತಡೀತಾರೆ. ಈ ತರಹ ಮಾಡಬಾರದು. ಅದಕ್ಕೇ ಆದ ಒಂದು ಪದ್ಧತಿ ಇದೆ. ಆ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು. ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಇದೆಲ್ಲದರ ವಿರುದ್ಧ ಯಾವ ರೀತಿ ಕ್ರಮ ತಗೋಬೇಕೋ ಹಾಗೇ ತಗೋಬೇಕು. ಜಾಗೃತಿ ಮೂಡಿಸಬೇಕು. ವಾಹನ ಸವಾರರು ಸ್ಪೀಡಾಗಿ ಬರ್ತಿರ್ತಾರೆ, ಆಗ ಹೋಗಿ ತಡೆಯುವ ಕೆಲಸ ಪೊಲೀಸರು ಮಾಡ್ತಾರೆ. ಇದು ನಿಲ್ಲಬೇಕು. ಇವತ್ತು ಇದೆಲ್ಲದರ ಬಗ್ಗೆ ಚರ್ಚಿಸಿ ಸೂಚನೆ ಕೊಡ್ತೇವೆ ಎಂದು ಸಚಿವರು ತಿಳಿಸಿದರು.
ಅಪಘಾತದಲ್ಲಿ ಮೃತಪಟ್ಟ ಮಗುವಿಗೆ ನಾಯಿ ಕಚ್ಚಿದೆ ಕರ್ಕೊಂಡು ಹೋಗುತ್ತಿದ್ದೇವೆಂದು ಪೋಷಕರು ತಿಳಿಸಿದರೂ ಪೊಲೀಸರು ಬಿಡಲಿಲ್ಲ. ಇಂಥ ಸಂದರ್ಭಗಳಲ್ಲಿ ಪೊಲೀಸರು ಸ್ವಂತಿಕ ಪ್ರದರ್ಶನ ಮಾಡಬೇಕು. ಸ್ವಂತ ನಿರ್ಧಾರ ತಗೋಬೇಕು ಎಂದು ಗೃಹ ಸಚಿವರು ತಿಳಿಸಿದರು.