ಚಂದ್ರವಳ್ಳಿ ನ್ಯೂಸ್, ತುಮಕೂರು:
ಗಂಡ-ಹೆಂಡತಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ನಡೆಸಬೇಕು,ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸುಗಳನ್ನು ಕೆಡಿಸಿಕೊಂಡು ವಿಚ್ಛೇದನಕ್ಕೆ ಅರ್ಜಿ ಹಾಕಬಾರದು,ಇಂದಿನ ದಿನಗಳಲ್ಲಿ ಚಿಕ್ಕ ವಿಚಾರಗಳನ್ನೇ ದೊಡ್ಡದಾಗಿ ಮಾಡಿಕೊಂಡು ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ,ಜೀವನಾಂಶ ಇತ್ಯಾದಿಗಳಿಗೆ ಗಂಡ-ಹೆಂಡತಿ ಬರುತ್ತಿರುವುದು ದುರಂತವೇ ಸರಿ, ಹಿರಿಯರ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕು,ತಂದೆ-ತಾಯಿ ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಿಸಿ, ಬುದ್ಧಿ ಕಲಿಸಿ,ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿಮಗೆ ಮದುವೆ ಮಾಡಿರುವುದು ನೀವು ವಿಚ್ಛೇದನ ಪಡೆಯುವುದಕ್ಕಲ್ಲ,ಮಕ್ಕಳ ಮುಖ ನೋಡಿಕೊಂಡು,ತಂದೆ-ತಾಯಿಗಳ ಮುಖ ನೋಡಿಕೊಂಡು ಪರಸ್ಪರರು ನಂಬಿಕೆಯಿಂದ ಜೀವನ ನಡೆಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಯಂತ್ ಕುಮಾರ್ ರವರು ದಂಪತಿಗಳಿಗೆ ಬುದ್ಧಿ ಹೇಳಿದರು.
ಅವರು ಇಂದು ನಡೆದ ಲೋಕ್ ಅದಾಲತ್ ನಲ್ಲಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ ಮತ್ತು ಜೀವನಾಂಶಕ್ಕೆ ಬಂದಿದ್ದ ೧೧ ದಂಪತಿಗಳನ್ನು ಪುನಃ ಒಂದು ಮಾಡಿ ಬುದ್ಧಿ ಹೇಳಿ ಸಿಹಿ ನೀಡಿ ಮನೆಗೆ ಕಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು ಸಿರಾ-೨, ಮಧುಗಿರಿ-೧, ಪಾವಗಡ-೨, ತುರುವೇಕೆರೆ-೧, ಗುಬ್ಬಿ-೧, ತಿಪಟೂರು-೨, ಚಿಕ್ಕನಾಯಕನಹಳ್ಳಿ-೧, ತುಮಕೂರಲ್ಲಿ ೧೦ ಜೋಡಿಗಳು ಪುನರ್ ಮಿಲನವಾಗಿದ್ದಾರೆ ಜಿಲ್ಲೆಯ ೨ ಕೌಟುಂಬಿಕ ನ್ಯಾಯಾಲಯದಲ್ಲಿ ೧೦ ಜೋಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ರವರ ಮುಂದೆ ೧ ಜೋಡಿ ಒಟ್ಟು-೨೧ ದಂಪತಿಗಳು ಪುನರ್ ಮಿಲನವಾಗಿ ಸಂತೋಷವಾಗಿ ಒಂಟಿಯಾಗಿ ಬಂದು ನ್ಯಾಯಾಲಯದಿಂದ ಜೋಡಿಯಾಗಿ ಹೋದ ಸಂತೋಷ ಇಂದು ನಮ್ಮೆಲ್ಲರಿಗೆ ಉಂಟಾಗಿದೆ ಎಂದರು.
ಯಾವುದೇ ಗಂಡ-ಹೆಂಡತಿ ಇರಬಹುದು ಮಕ್ಕಳ ಹಿತದೃಷ್ಟಿಯಿಂದ, ತಂದೆ-ತಾಯಿಗಳ ಹಿತದೃಷ್ಟಿಯಿಂದ ಸಮಾಜದ ಹಿತದೃಷ್ಟಿಯಿಂದ ಒಂದಾಗಿರಬೇಕು, ವಯಸ್ಸು ಪುನಃ ಬರುವುದಿಲ್ಲ, ಸಮಯ ಕಳೆದುಹೋಗುತ್ತದೆ ಇಂದಿನ ಚಿಕ್ಕ ತಪ್ಪಿಗೆ ಮುಂದೆ ಭಾರೀ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ೭ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ, ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಮುನಿರಾಜ, ೧ನೇ ಅಧಿಕ ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಜಯಪ್ರಕಾಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.