ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐದು ದಶಕಗಳಿಂದಲೂ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಹಾಡ್ಲಹಳ್ಳಿ ನಾಗರಾಜ್ ಅವರ ಪ್ರತಿಭಟನೆಗ ಕನ್ನಡ ಸಾಹಿತ್ಯ ಪರಿಷತ್, ಅಕಾಡೆಮಿಗಳು ಹಾಗೂ ಸರ್ಕಾರ ಮನ್ನಣೆ ನೀಡಿ ಗುರುತಿಸದಿರುವುದು ನೋವಿನ ಸಂಗತಿ ಎಂದು ಹಿರಿಯ ಸಾಹಿತಿ, ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ವಿಷಾದಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಹಾಡ್ಲಹಳ್ಳಿ ನಾಗರಾಜ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸೃಜನಶೀಲ ಸಾಹಿತಿಯನ್ನು ನಿರ್ಲಕ್ಷಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.
ಹಣ, ಜಾತಿ, ಲಾಬಿಗಳ ಹಿಂದೆ ಬಿದ್ದು ಅರ್ಜಿ ಹಾಕಿಕೊಂಡು ಪ್ರಶಸ್ತಿ ಪಡೆಯುವ ಈ ಕಾಲದಲ್ಲಿ ಹಾಡ್ಲಹಳ್ಳಿ ನಾಗರಾಜ್ ಅವರ ಸಾಹಿತ್ಯಿಕ, ಸಾಮಾಜಿಕ ಹಾಗು ವೈಯಕ್ತಿಕ ಜೀವನ ಈ ಕಾಲದ ಒಂದು ಅವಶ್ಯಕ ಮಾದರಿಯಾಗಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ, ನಾಗರಾಜ್ ಅವರ ಸಜ್ಜನಿಕೆ, ಸೌಮ್ಯತೆ ಅವರನ್ನು ಮುಖ್ಯವಾಹಿನಿ ಸಾಹಿತ್ಯ ಕ್ಷೇತ್ರಕ್ಕೆ ಬರದಂತೆ ತಡೆದಿದೆ. ಏನನ್ನೂ ಕೇಳದ ಸ್ವಾಭಿಮಾನಿಯೊಬ್ಬನನ್ನು ಸಾಹಿತ್ಯ ಕ್ಷೇತ್ರ ನಿರ್ಲಕ್ಷ್ಯ ಮಾಡುವುದು ಆ ಕ್ಷೇತ್ರದ ಸೂಕ್ಷ್ಮತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಡಾ. ಬೇಲೂರು ರಘುನಂದನ್ ಅವರು ಪೃಕೃತಿ ಸೂಕ್ಷ್ಮಗಳನ್ನು ಅರಿಯಲು ಹಾಡ್ಲಹಳ್ಳಿ ಅವರ ಕೃತಿಗಳು ಅತ್ಯಂತ ಸಹಕಾರಿಯಾಗಿವೆ ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮಲೆನಾಡಿನ ಭಾಗದ ಸಂತನಂತೆ ಕುಳಿತು ಸಾಹಿತಿ ನಾಗರಾಜ್ ಸಾಹಿತ್ಯ ರಚಿಸಿದ್ದಾರೆ ಎಂದರು.
ನಾಡಿನ ಸಾಹಿತ್ಯಾಸಕ್ತರು ಸೇರಿ ಹಾಡ್ಲಹಳ್ಳಿ ನಾಗರಾಜ್ ಅವರನ್ನು ಗೌರವಿಸಿದರು. ಮಲೆನಾಡಿನ ಹಲವಾರು ಸಂಘಟನೆಗಳು, ಸಾಹಿತ್ಯ ಸಂಘಟನೆಗಳು, ರಂಗಕಲಾವಿದರ ಸಂಘಟನೆಗಳು ಹಾಗು ಹಲವಾರು ಸಂಘ ಸಂಸ್ಥೆಗಳು ಸಂಭ್ರಮದಿಂದ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಚಲಂ ಹಾಡ್ಲಹಳ್ಳಿ, ಕವಿ ಸವಿರಾಜ್ ಆನಂದೂರು, ಧರ್ಮರಾಜ ಕಡಗ, ಕತೆಗಾರ್ತಿ ದಯಾ ಗಂಗನಘಟ್ಟ ಮತ್ತಿತರರು ಇದ್ದರು.