ತೆರಿಗೆ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ನಾಡುನುಡಿ ಬಳಗ ಚಿತ್ರದುರ್ಗ ಇವರ ಸಹಯೋಗದಲ್ಲಿ ನಗರದ ಕ್ರೀಡಾ ಭವನದಲ್ಲಿ ನಿರ್ದಿಗಂತ, ಮೈಸೂರು ರಂಗತಂಡವು ಕೊಡಲ್ಲ ಅಂದ್ರ ಕೊಡಲ್ಲ…ನಾಟಕವನ್ನು ಪ್ರಸ್ತುತ ಪಡಿಸಿದರು.

ಇಟಾಲಿಯನ್ ಪ್ರಸಿದ್ಧ ನಾಟಕಕಾರ, ನೋಬೆಲ್ ಪ್ರಶಸ್ತಿ ವಿಜೇತ ದಾರಿಯೋ ಫೋ ಅವರ ಕಾಂಟ್ ಪೇ,ವೋಂಟ್ ಪೇಆಧಾರಿತ ನಾಟಕ ಇದಾಗಿತ್ತು.

- Advertisement - 

ಆಳುವ ಸರ್ಕಾರಗಳು ತೆರಿಗೆಯನ್ನು ಯಾವ ಮಟ್ಟಕ್ಕೆ ಜನರಿಂದ ಪಡೆಯಿಚ್ಚಿಸುತ್ತವೆ ಎಂಬ ಅಂಶವನ್ನು ಕೇಂದ್ರೀಕರಿಸಿ ನಾಟಕವು ಸಂಯೋಜನೆಗೊಂಡಿದೆಯಾದರೂ  ಅಷ್ಟಕ್ಕೇ ಸೀಮಿತಗೊಳ್ಳದೆ ಸಾಮಾಜಿಕ ತಲ್ಲಣ ಮತ್ತು ಸಂವೇದನೆಯ ರೂಪವಾಗಿಯೂ ತೋರಿಬಂದಿತು.

ದೇಶಕಾಲವನ್ನು ಮೀರಿ ಜನರ ಸಂಕಷ್ಟಗಳು ಅವರು ಎದುರಿಸಬೇಕಾದ ಸವಾಲುಗಳು ಸಹ ಕಾಲತೀತವಾದವುಗಳು ಅಂತೆ ದೇಶಾತೀತವಾದವುಗಳು ಎಂಬುದಕ್ಕೆ ನಿದರ್ಶನವೆಂಬಂತೆ ಬಿಂಬಿತವಾಯಿತು.

- Advertisement - 

ಸಮಕಾಲೀನವಾಗಿ ಜನರು ಯಾವ ರೀತಿಯ ಜೀವನಮಟ್ಟವನ್ನು ಹೊಂದಿದ್ದಾರೆ ಅವರ ಆಸೆ ಆಶೋತ್ತರಗಳಿಗೆ ಪ್ರಭುತ್ವವು ಸ್ಪಂದಿಸುವ ಬಗೆ ಹೇಗಿದೆ ಎಂದು ತಮಗೆ ತಾವೇ ಕೇಳಿಕೊಂಡರೆ ಬಹುಶಃ ಅವರಿಗೆ ಸವಾಲುಗಳದ್ದೇ ಹೆಚ್ಚಿನ ಚಿಂತೆಯಾಗುವುದು ಖಾತರಿಯಂತೆ ತೋರುತ್ತದೆ.

 ಈ ಹಿನ್ನಲೆಯಲ್ಲಿ ಹೆಚ್ಚುತ್ತಿರುವ ಬೆಲೆ ಹೇರಿಕೆಗಳು ಒಂದು ಕಡೆಯಾದರೆ, ಮತ್ತೊಂದೆಡೆ ಪ್ರಭುತ್ವವು ಕಾರ್ಪೊರೇಟ್ ಬೆಂಬಲಿತ ಮಾದರಿಯ ಲಾಭಕೋರ ನಿಯಮಾವಳಿಯಂತೆ ತೆರಿಗೆ ರೂಪದಲ್ಲಿ ವಸೂಲಿ ಬಾಜಿಗಿಳಿದಿರುವುದು ಕಣ್ಣಮುಂದಿದ್ದರೂ ಪ್ರಜಾಸತ್ತೆಯು ಅದನ್ನು ಪ್ರಶ್ನಿಸುವ ಯಾವ ಪ್ರಜ್ಞಾವಂತಿಯನ್ನು ಪ್ರದರ್ಶಿಸದೆ ಅದನ್ನು ಒಪ್ಪಿ ನಡೆಯುವ ಜಾಯಮಾನಕ್ಕೆ ಒಗ್ಗಿಕೊಂಡಿದೆ. ಈ ನಡುವೆ ಅಂತಹ ಪ್ರತಿರೋಧದ ನಡೆಗಳು ಕೇವಲ ಮಿಂಚಿ ಮರೆಯಾದ ವರದಿಗಳಾಗಿ ಮಾತ್ರ ನೋಡಲು ಸಿಕ್ಕುತ್ತವೆ.

ಇಂತಹ ಹೊತ್ತಿನಲ್ಲಿ ನಿಜಕ್ಕೂ ಜನರು ಹೊರಬೇಕಾದ ಮತ್ತು  ಹೇರಿಕೊಳ್ಳಬೇಕಾದ  ಎರಡೂ ಆಯ್ಕೆಗಳಿಂದ ಅಂತರವನ್ನು ತಾನೇ ತಾನಾಗಿ ಕಾಯ್ದುಕೊಳ್ಳದೆ. ಬಡವಾಗುತ್ತಿರುವುದು ಜನಜನಿತ ಸತ್ಯವೆಂಬಂತೆ ನಾಟಕ ಕಟ್ಟಿಕೊಟ್ಟಿದೆ. ಮಂಗಳೂರು ಮತ್ತು ಹಾವೇರಿಯ ಜವಾರಿ ಮಿಶ್ರಿತ ಕನ್ನಡದಲ್ಲಿ ನಾಟಕವು ರಂಗಕ್ಕೆ ಒಳಪಟ್ಟಿದೆ.

ರಾಷ್ಟ್ರೀಯ ನಾಟಕ ಶಾಲೆಯ ಕಲಾವಿದೆ ಸಲ್ಮಾ ದಂಡಿನ್ ಅವರ ಹಳ್ಳಿಯ ಸಾಮಾನ್ಯ ಮಹಿಳೆಯ ಪಡಿಪಾಟಲು ಮತ್ತು ಜೀವನ ಸಾಂಗತ್ಯದ ಅಭಿನಯ ಮನೋಜ್ಞವಾಗಿತ್ತು, ಅಂತೆ ಪೊಲೀಸ್ ಪೇದೆ ಪಾತ್ರದ ದಿನೇಶ್ ನಾಯ್ಕ್ ಅವರ ಕ್ರಾಂತಿಯ ಚಕ್ರ ತಿರುಗುತ್ತಿರಬೇಕು ಎಂಬ ಮಾತುಗಳು ನಾಟಕದಾಚೆಯೂ ಕಾಡದೆ ಬಿಡುವುದಿಲ್ಲ.

ಬಸುರಿ ವೇಷವನ್ನು ಪುಟ್ಟನ ಬರುವಿಕೆಯ ಹಂಬಲಕ್ಕೆಂದೆ ಭಾವಿಸಿಕೊಂಡ ಕಲಾವಿದ ಚರಿತ್ ಸುವರ್ಣ ಅವರ ನಟನೆ  ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ದೇಶದ ಪ್ರಜೆಯಾಗುವುದೆಂದರೆ ತೆರಿಗೆದಾರರೆಂದೇ ಭಾವಿಸುವ ಸರ್ಕಾರದ ನಿಲುವುಗಳ ವಿರುದ್ಧ ನಾಟಕದ ಮುಕ್ತಾಯದ ಒಕ್ಕೊರಳಿನ ಹಾಡು ಪ್ರೇಕ್ಷಕರ ಮನಸ್ಸನ್ನು ತಣಿಸಿತು.

ಮಾಧ್ಯಮ ಅಕಾಡಮಿ ಸದಸ್ಯರಾದ ಅಹೋಬಲಪತಿ ಅವರು ನಾಟಕದ ಕುರಿತು ಪ್ರತಿಕ್ರಿಯಿಸಿದರು. ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ನಟರಾಜ್ , ನಿವೃತ್ತ ಪ್ರಾಧ್ಯಾಪಕ ಡಾ.ವಿ.ಬಸವರಾಜ, ವಕೀಲ ರಮೇಶ ನಾಟಕದ ಕುರಿತು ಸಂವಾದಿಸಿದರು.

ಯಾದಲಗಟ್ಟೆ ಪ್ರಕಾಶ್ ಸ್ವಾಗತಿಸಿ ವಂದಿಸಿದರು. ವಕೀಲರಾದ ವಿಶ್ವಾನಂದ(ಕೆವಿಕೆ) ನಿರೂಪಿಸಿದರು. ಶ್ರೀನಿವಾಸರಾಜು, ಶಿವಶಂಕರ ಸೀಗೆಹಟ್ಟಿ, ವೇದಾಂತ ಏಳಂಜಿ. ಸಿದ್ದೇಶ್ ಕೆ. ಹನುಮಂತಪ್ಪ, ಪ್ರದೀಪ್, ಮಂಜುನಾಥ ಆರ್, ಸಿದ್ದಪ್ಪ, ಕುಮಾರ್ ಹೆಚ್, ಮೋದೂರು ತೇಜ, ಟಿ.ರಾಮು ಮುಂತಾದವರಿದ್ದರು.

 

 

Share This Article
error: Content is protected !!
";