ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪ್ರತಿಯೊಬ್ಬರು ಸರ್ಕಾರಿ ಕೆಲಸ ಸಿಗುತ್ತದೆಯೆಂದು ಓದುವುದಲ್ಲ. ಶಿಕ್ಷಣಕ್ಕೆ ಜೀವನ ರೂಪಿಸಿಕೊಳ್ಳುವ ಶಕ್ತಿ ಹೊಂದಿದೆ. ಆದ್ದರಿಂದ ಸಿಕ್ಕಿರುವ ಅವಕಾಶ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಆದಿಜಾಂಬವ ಅಭಿವೃದ್ದಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಹಾಗೂ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶ ವಿದ್ಯಾಭ್ಯಾಸಕ್ಕೆ ಅತಿ ಹೆಚ್ಚು ಮಹತ್ವ ಕೊಟ್ಟಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಸತತ ಅಧ್ಯಯನ, ಪ್ರಯತ್ನ ಹೊಂದಿದ್ದರೆ ಜೀವನದಲ್ಲಿ ಉನ್ನತ ಸಾಧನೆಗಳಿಸಲು ಸಾಧ್ಯ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೈದ ಸಾಧಕರು ಮಾದರಿಯಾಗಬೇಕು. ಅಲ್ಲದೇ ಅಂಬೇಡ್ಕರ್, ಗಾಂಧೀಜಿ, ಸರ್‌ಎಂ.ವಿ ಅಂತಹ ನಾಯಕರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಓದಿನಲ್ಲಿ ಮನಸ್ಸಿದ್ದರೆ ಐಎಎಸ್, ಕೆಎಎಸ್ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಬಹುದು ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತ ಸುಂದರ್‌ಮೂರ್ತಿ ಮಾತನಾಡಿ ನಗರಸಭೆ ಮಕ್ಕಳ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ಆದ್ಯತೆ ನೀಡಿದೆ. ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ವಹಿಸಿದರೆ ಉದ್ಯೋಗ ಪಡೆಯಲು ಸಾಧ್ಯ. ಯಾವುದೇ ಒಂದು ಸಣ್ಣ ಉದ್ಯೋಗ ಸಿಕ್ಕರೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ.ಸಣ್ಣಪ್ಪ ಮಾತನಾಡಿ ಮಕ್ಕಳಿಗೆ ಕುಡಿಯಲು ಶೀಘ್ರವೇ ಮಾರಿಕಣಿವೆ ನೀರು ವ್ಯವಸ್ಥೆ ಮಾಡುತ್ತೇವೆ. ಬೀದಿ ದೀಪದ ವ್ಯವಸ್ಥೆ ಜತೆಗೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು.
ತುಮಕೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯಎಚ್.ತಿಪ್ಪೇಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ ಈ ಸಂಸ್ಥೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬ ಆಶಯ ಹೊಂದಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಲು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣ ಪಡೆಯಬೇಕು. ಇಲ್ಲದಿದ್ದರೆ ಅದು ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಾಲಕೃಷ್ಣ, ವಾಣಿ ಕಾಲೇಜು ಪ್ರಾಂಶುಪಾಲ ಡಾ.ಆರ್.ಮಹೇಶ್, ಹೊಸಯಳನಾಡು ಕೆಪಿಎಸ್ ಶಾಲೆ ಎಸ್.ಡಿ.ಎಂಸಿ ಅಧ್ಯಕ್ಷ ತಿಮ್ಮಶೆಟ್ರು ಮಾತನಾಡಿದರು.
ವಿದ್ಯಾಸಂಸ್ಥೆ ಮುಖ್ಯಸ್ಥ ಬಿ.ಪಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮೌಲನ್ ಅಜಾದ್ ಶಾಲೆ ಮುಖ್ಯಶಿಕ್ಷಕ ನಯಾಜ್, ಪ್ರಾಂಶುಪಾಲ ಕೆ.ರಂಗಪ್ಪ, ನಿವೃತ್ತ ಮುಖ್ಯಶಿಕ್ಷಕ ದಾಸಪ್ಪ, ಮುಖಂಡರಾದ ಜಿ.ಎಲ್.ಮೂರ್ತಿ, ಪ್ರದೀಪ್, ಲೋಕಿಕೆರೆ ಮಂಜುನಾಥ್, ಉಪನ್ಯಾಸಕರು ಇತರರಿದ್ದರು.

