ಬದುಕಿನ ದಾಖಲಾತಿ ಭಾಷೆ-ಡಾ.ಬಂಜಗೆರೆ ಜಯಪ್ರಕಾಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾಷೆ ಎಂಬುದು ಬದುಕಿನ ದಾಖಲಾತಿ. ಇತಿಹಾಸದ ಬಹಳಷ್ಟು ಅಂಶಗಳನ್ನು ಭಾಷೆ ಒಳಗೊಂಡಿರುತ್ತದೆ. ಒಂದು ಸಮುದಾಯದ ಇತಿಹಾಸ
, ಸಂಸ್ಕೃತಿ, ಬೆಳವಣಿಗೆ ಹಾಗೂ ಮೂಲ, ವೃತ್ತಿ ಧೋರಣೆಗಳನ್ನು ಭಾಷೆ ಬಹಳ ಚೆನ್ನಾಗಿ ಬಿಂಬಿಸಲಿದೆ ಎಂದು ಸಂಸ್ಕೃತಿ ಚಿಂತಕರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಡಾ.ಆಂಜನೇಯ ಉರ್ತಾಳ್ ಅವರ ಬೇಡ ಬುಡಕಟ್ಟಿನ ಭಾಷಿಕ ಸಂಕಥನ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

- Advertisement - 

ಆಂಜನೇಯ ಉರ್ತಾಳ್ ಅವರ ಬೇಡ ಬುಡಕಟ್ಟಿನ ಭಾಷಿಕ ಸಂಕಥನ ಕೃತಿಯು ಮ್ಯಾಸಬೇಡ ಬುಡಕಟ್ಟು ಕರ್ನಾಟಕದ ಯಾವ ಸನ್ನಿವೇಶಗಳಲ್ಲಿ ಇಲ್ಲಿಗೆ ಬಂದಿದೆ, ಯಾವ ರೀತಿಯಲ್ಲಿ ಜೀವನ ಕ್ರಮ ರೂಪಿಸಿಕೊಂಡಿದೆ ಎನ್ನುವುದರ ಕುರಿತು ಅಚ್ಚುಕಟ್ಟಾಗಿ, ಒಳ್ಳೆಯ ಅಧ್ಯಯನ ಕ್ರಮ ಅನುಸರಿಸಿ ಅತ್ಯಂತ ಶ್ರದ್ಧೆಯಿಂದ ನಿರೂಪಿಸಲಾಗಿದೆ. ಹೊಸ ವಿಷಯವನ್ನು ಮ್ಯಾಸಬೇಡ ಬುಡಕಟ್ಟಿನ ಸಂದರ್ಭಕ್ಕೆ ತಂದು ಅವರ ಭಾಷಿಕ ಸಂಕಥನ ಕಟ್ಟಿಕೊಡಲಾಗಿದೆ. ಹಾಗಾಗಿ ಇದು ವಿಶಿಷ್ಟ ಹಾಗೂ ಗಮನಾರ್ಹವಾಗಿದೆ.

ಯಾವುದೇ ಬುಡಕಟ್ಟುಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ ಸಾಮಾನ್ಯವಾಗಿ ಆಚರಣೆ, ದೇವರು, ಬೆಡಗು, ಕುಲಗಳ ಬಗ್ಗೆ ಹಾಗೂ ಶರೀರಶಾಸ್ತ್ರದ ಬಗ್ಗೆ ಅಧ್ಯಯನ ಮಾಡುತ್ತಾರೆ. ಆದೀಮ ಸಮುದಾಯಗಳಾದ ಬುಡಕಟ್ಟುಗಳು ತಮ್ಮ ಚರಿತ್ರೆಯನ್ನು ಯಾವ ರೀತಿಯಾಗಿ ರೂಪಿಸಿಕೊಂಡಿವೆ ಎಂಬುದನ್ನು ಭಾಷಾಶಾಸ್ತ್ರದ ಆಧಾರದಲ್ಲಿ ಸಾಮಾಜಿಕ ಉಪಭಾಷೆಯನ್ನು ವಿಸ್ತಾರವಾಗಿ ಅಧ್ಯಯನ ಮಾಡುವ ಮೂಲಕ ಕಟ್ಟಿಕೊಡಲಾಗಿದೆ ಎಂದು ಹೇಳಿದರು.
ಪ್ರತಿಯೊಂದು ಬುಡಕಟ್ಟು ತನ್ನದೇ ಒಂದು ಭಾಷಾ ತಳಹದಿ ಹೊಂದಿರುತ್ತದೆ. ಪ್ರತಿಯೊಂದು ಬುಡಕಟ್ಟು  ಒಂದು ಕಾಲದಲ್ಲಿ ಸ್ವಯಂಪೂರ್ಣವಾಗಿದ್ದು, ತನ್ನದೇ ವಾಸದ ನೆಲೆ, ಬದುಕಿನ ಕ್ರಮ, ಅಲೋಚನಾ ಕ್ರಮ, ಆರಾಧನಾ ಕ್ರಮ, ವೈವಾಹಿಕ ಕ್ರಮ ಸೇರಿದಂತೆ ಎಲ್ಲವನ್ನೂ ಹೊಂದಿದ್ದು, ಪ್ರದೇಶಗಳಲ್ಲಿ ಬೆರೆಯುತ್ತಾ ವಿಶಿಷ್ಟವಾಗಿರುವ ಭಾಷೆಗಳಾಗಿ ಬೆಳೆಯುತ್ತವೆ.

- Advertisement - 

ಬುಡಕಟ್ಟುಗಳು ಬೆಳೆವಣಿಗೆಯಾದ ವಿಧಾನಗಳು ಹೇಗೆ ಎಂಬುದನ್ನು ಭಾಷೆಯ ದಾಖಲಾತಿ ಬಿಡಿಸಿ ಬಿಡಿಸಿ ತೋರಿಸಲಿದೆ ಎಂದು ತಿಳಿಸಿದ ಅವರು, ಸಾಮಾಜಿಕ ಉಪಭಾಷೆಗಳನ್ನು ಅಧ್ಯಯನ ಮಾಡುವುದು ಪ್ರಾದೇಶಿಕ ಉಪಭಾಷೆಗಳನ್ನು ಅಧ್ಯಯನ ಮಾಡುವಷ್ಟೇ ಮಹತ್ವವಾದುದು. ಜಾತಿ, ಕುಲ, ಪಂಗಡಗಳ ದೇಶದಲ್ಲಿ ಸಂಸ್ಕøತಿಯ ಪ್ರತಿ ಸಣ್ಣ ವಿವರಗಳನ್ನು ಸೂಕ್ಷ್ಮ ಅಧ್ಯಯನಗಳನ್ನು ಮಾಡಿದಷ್ಟು ಭಾರತೀಯ ಸಮಾಜದ ವೈಶಿಷ್ಟ್ಯತೆ ಹಾಗೂ ಔದಾರ್ಯತೆ ಅರ್ಥವಾಗಲಿದೆ. ಪ್ರತಿ ಬುಡಕಟ್ಟಿನ ಭಾಷೆಯು ಕನ್ನಡ ಕಟ್ಟಲು ಕೆಲಸ ಮಾಡಿದೆ ಎಂದು ಹೇಳಿದರು.

ಶಿವಮೊಗ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಎಂ.ಮುತ್ತಯ್ಯ ಮಾತನಾಡಿ, ಜಾತಿ ಅವಮಾನ, ವೃತ್ತಿ ಅವಮಾನ ಎಂದು ಕೇಳಿದ್ದೇವೆ ಆದರೆ ನಮ್ಮ ಈ ಭಾಗದ ಜನರು ತಮ್ಮ ಬದುಕಿನಲ್ಲಿ ಭಾಷೆಯಿಂದ ಅವಮಾನ ಅನುಭವಿಸಿದ್ದಾರೆ. ಇಂತಹ ಅವಮಾನದ ಸಂಗತಿ, ಅವಮಾನದ ಅಸ್ತ್ರವನ್ನು ಆಂಜನೇಯ ಉರ್ತಾಳ್ ಅವರು ಅಧ್ಯಯನಕ್ಕೆ ಯೋಗ್ಯವಾದ ವಸ್ತು ಆಯ್ಕೆ ಮಾಡಿಕೊಂಡು, ಸಮಾಜದಲ್ಲಿ ಆ ಭಾಷೆಗೆ ಇರುವ ಅವಮಾನ ಹಾಗೂ ಶ್ರೇಷ್ಟತೆಯ ವ್ಯಸವನ್ನು ಕಳಚಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಮ್ಯಾಸಬೇಡರ ಭಾಷೆ ಬಗ್ಗೆ ಬಹಳಷ್ಟು ಜನರು ಸಂಶೋಧನಾ ಅಧ್ಯಯನದ ಭಾಗವಾಗಿ ಬರೆದಿದ್ದಾರೆ. ಆಂಜನೇಯ ಉರ್ತಾಳ್ ಅವರ ಬೇಡ ಬುಡಕಟ್ಟಿನ ಭಾಷಿಕ ಸಂಕಥನ ಕೃತಿಯಲ್ಲಿ ನಾಲ್ಕು ಸ್ತರದ ಭಾಷೆ ಗುರುತಿಸಿದ್ದಾರೆ. ಮ್ಯಾಸಬೇಡರು ಹೊರತಾದ ಜನರು ಮಾತನಾಡುವ ಭಾಷೆ, ಮ್ಯಾಸಬೇಡರು ಮಾತನಾಡುವ ಕನ್ನಡ, ಮ್ಯಾಸಬೇಡರು ಮಾತನಾಡುವ ತೆಲಗು, ಅವರ ಆಚೆಗಿರುವವರು ಮಾತನಾಡುವ ತೆಲಗು ಹೀಗೆ ಅನೇಕ ಶಬ್ಧಗಳನ್ನು ಹುಡುಕಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಒಟ್ಟಾರೆಯಾಗಿ ಈ ಕೃತಿಯು ಮ್ಯಾಸಬೇಡರ ಕನ್ನಡದ ಕುರಿತು ಪ್ರತಿಪಾದನೆ ಮಾಡಿದೆ ಎಂದು ತಿಳಿಸಿದ ಅವರು, ಮ್ಯಾಸಬೇಡರ ತೆಲುಗಿಗೆ ಬಹಳಷ್ಟು ಆಯಾಮಗಳಿವೆ.

ವ್ಯಕ್ತಿಗತವಾಗಿಯೂ ಭಾಷೆಯಲ್ಲಿ ಹಾಗೂ ಧ್ವನಿಪೆಟ್ಟಿಗೆಯಲ್ಲಿಯೂ ವ್ಯತ್ಯಾಸ ಕಾಣಬಹುದಾಗಿದ್ದು, ವೈವಿಧ್ಯಮಯವಾದ ಭಾಷೆಯನ್ನು ಅಧ್ಯಯನ ಮಾಡುವುದು ಸಾಮಾನ್ಯ ಕೆಲಸವಲ್ಲ. ಮ್ಯಾಸಬೇಡರ ಭಾಷಿಕ ಸಂಕಥನವನ್ನು ಮ್ಯಾಸಬೇಡರಿಗಿಂತ ಹೊರಗಿನವರು ಹೆಚ್ಚು ಚೆನ್ನಾಗಿ ಓದಬೇಕು. ಭಾಷೆಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಸಮುದಾಯ, ಸಂಸ್ಕತಿ, ಅಬಿವ್ಯಕ್ತಿಯೂ ಅರ್ಥವಾಗುವುದಿಲ್ಲ. ನಾವು ಆಗ ಅವರನ್ನು ಮೂಲೆಗುಂಪು ಮಾಡುತ್ತೇವೆ. ಹಾಗಾಗಿ ಯುವ ಜನತೆಯು ಲ್ಯಾಂಡ್ ಮಾರ್ಕ್ ಆಗುವಂತೆ ಸಂಶೋಧನೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಅಶೋಕ ಕುಮಾರ ರಂಜೇರೆ ಮಾತನಾಡಿ, ಭಾಷೆ ಬಹಳ ಪವರ್‍ಫುಲ್ ಮಾಧ್ಯಮ. ಅದು ಕೇವಲ ಸಂವಹನ ಮಾಧ್ಯಮ ಅಲ್ಲ. ಸಮುದಾಯದ ಸಾಂಸ್ಕøತಿಕ ಚರಿತ್ರೆಯನ್ನು ಇತರೆ ಆಕರಗಳಿಗಿಂತ ಖಚಿತವಾಗಿ ಹೇಳುವುದಕ್ಕೆ ಸಾಧ್ಯತೆ ಇರುವುದು ಭಾಷೆಯ ಮೂಲಕ ಮಾತ್ರ ಸಾಧ್ಯ. ಆಕರಗಳಲ್ಲಿ ಅಧಿಕೃತ ಆಕರ ಭಾಷೆ. ಲಿಖಿತ ಆಕರಗಳು ತಪ್ಪಾಗಬಹುದು  ಆದರೆ ಭಾಷೆಯ ರಚನೆಯೊಳಗೆ ಸತ್ಯವಾಗಿರುತ್ತದೆ ಎಂದರು.

ಸರ್ಕಾರಿ  ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಸಂಶೋಧನೆಯ ಗುಣಮಟ್ಟದ ಪ್ರಶ್ನೆ ಎದುರಾಗಿರುವ ಕಾಲಘಟ್ಟದಲ್ಲಿ ಬೇಡ ಬುಡಕಟ್ಟಿನ ಭಾಷಿಕ ಸಂಕಥನಬಯಲುಸೀಮೆಯ ಬೇಡ ಬುಡಕಟ್ಟಿನ ಸಮಾಜೋಭಾಷಿಕ ಅಧ್ಯಯನಕ್ಕೊಂದು ಮಾದರಿ ಎನ್ನಬಹುದಾದ ಸಂಶೋಧನಾ ಕೃತಿ ಇದಾಗಿದೆ.

ಪರಂಪರೆ ಮತ್ತು ವರ್ತಮಾನದ ಮಧ್ಯೆ ಸಹಜವಾಗಿಯೇ ಏರ್ಪಡುವ ಪಲ್ಲಟಗಳನ್ನು ತಾತ್ವಿಕವಾಗಿ ವಿವೇಚಿಸಿದ್ದಾರೆ.
ಸಂಶೋಧನೆ ಕೃತಿ ಎಂದರೆ ಅದು ಸೃಜನಶೀಲ ಸಾಹಿತ್ಯ. ಇಲ್ಲಿ ಅಧ್ಯಯನದ ಜತೆ ಭಾಷೆ, ಪರಿಸರ ಹಾಗೂ ವಿಷಯದ ಒಳಗೊಳ್ಳುವಿಕೆಯನ್ನು ನಿರೂಪಣೆ ಮಾಡಲಾಗಿರುತ್ತದೆ. ಈ ಮೂಲಕ ಸಮುದಾಯವನ್ನು ಸಕಲ ರೀತಿಯಲ್ಲೂ ಕಟ್ಟಿಕೊಡುವ ಶ್ರೀಮಂತಿಕೆಯ ಸಾಹಿತ್ಯವಾಗಿದೆ ಎಂದರು.

ಭಾಷೆಯ ಕೃಷಿಗೆ ಸಂಶೋಧನಾ ಕ್ಷೇತ್ರ ಹೆಚ್ಚು ನೆರವಾಗಿದೆ. ಕೇವಲ ಪದವಿ, ಸ್ನಾತಕೋತ್ತರ ಪದವಿ ಉಪನ್ಯಾಸಕರು ಸಂಶೋಧನೆ ನಡೆಸಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ. ಪ್ರಾಥಮಿಕ ಶಾಲೆ ಶಿಕ್ಷಕರು ಸಹ ಆಸಕ್ತಿಯಿಂದ ಅಧ್ಯಯನ ನಡೆಸಿ ಸಂಶೋಧನೆ ನಡೆಸಬಹುದು. ಹೆಚ್ಚಿನ ಆಸಕ್ತರು ಈ ಕ್ಷೇತ್ರಕ್ಕೆ ಬರಬೇಕು ಎಂದು ತಿಳಿಸಿದರು.

ಗಡಿ ಪ್ರದೇಶಗಳಲ್ಲಿನ ಭಾಷಾಸಂಪರ್ಕ ಮತ್ತು ಭಾಷಾಮಿಶ್ರಣಕ್ಕೆ ಕಾರಣವಾಗುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸನ್ನಿವೇಶಗಳು, ಅವುಗಳ ಮಧ್ಯ ನಡೆಯುವ ನುಡಿಬೆರಕೆ ಮತ್ತು ನುಡಿಜಿಗಿತಗಳು ಹೇಗೆ ರೂಪುಗೊಳ್ಳುತ್ತವೆ ಎನ್ನವುದನ್ನು ತಾರ್ಕಿಕವಾಗಿ ನಿರೂಪಿಸಿದ್ದಾರೆ. ಡಾ. ಆಂಜನೇಯ ಉರ್ತಾಳ್ ಅವರ ವ್ಯಾಪಕವಾದ ಕ್ಷೇತ್ರಕಾರ್ಯದ ಜೊತೆಗೆ ಸಾಮಾಜಿಕ, ಜಾನಪದ, ಭಾಷಿಕ ಕೃತಿಗಳ ವಿಸ್ತೃತ ಅಧ್ಯಯನವು ಈ ಕೃತಿಯ ಗುಣಾತ್ಮಕ ಅಂಶವಾಗಿದೆ ಎಂದರು.
ವ್ಯಾವಹಾರಿಕ ಭಾಷೆಯ ವಿಶ್ಲೇಷಣೆ ಮತ್ತು ವಿಷಯಪ್ರತಿಪಾದನೆಯಲ್ಲಿ ಕೃತಿಕಾರರು ತೋರಿರುವ ಸಮತೋಲನ ಮನೋಧರ್ಮ, ಶಿಸ್ತು, ಬದ್ಧತೆಯು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಈ ಎಲ್ಲಾ ಅಂಶಗಳಿಂದ ಇದು ಸಮುದಾಯದ ಪ್ರಾದೇಶಿಕ ಭಾಷಿಕ ಸಂಸ್ಕೃತಿಯನ್ನು ಕುರಿತಾದ ಮುಖ್ಯ ಕೃತಿಯಾಗಿದೆ ಎಂದು ತಿಳಿಸಿದರು.

ಹೊಸದುರ್ಗ ಕಿಟ್ಟದಾಳ್ ಕಲ್ಪತರು ಸಂಯುಕ್ತ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಹಾಗೂ ಕೃತಿಕಾರ ಡಾ.ಆಂಜನೇಯ ಉರ್ತಾಳ್ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲೂ ಭಾಷೆ ಉಳಿಯಬೇಕು. ಓದು, ಬರಹ, ಕ್ಷೇತ್ರಕಾರ್ಯ, ವಿದ್ವಾಂಸರ ಒಡನಾಟದಿಂದ ಸಂಶೋಧನಾ ವಿಷಯ ಪಕ್ವವಾಗುತ್ತದೆ. ಈ ಕ್ಷೇತ್ರಕ್ಕೆ ಆಸಕ್ತರು ಹೆಚ್ಚು ಬರಬೇಕು ಎಂದರು.

ಅಧ್ಯಯನ ನಡೆಸಲು ಸಾಕಷ್ಟು ವಿಷಯಗಳಿವೆ. ಆಸಕ್ತಿ ಜತೆಗೆ ಪಕ್ವವಾದ ಪೂರ್ವ ತಯಾರಿ ಬಹು ಮುಖ್ಯವಾಗುತ್ತದೆ. ಸೌಲಭ್ಯಗಳು ಹೆಚ್ಚಾಗಿದ್ದು ಬಳಸಿಕೊಳ್ಳುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಡಾ.ಎಸ್.ಮಾರುತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಹೆಚ್.ಜಿ.ವಿಜಯಕುಮಾರ, ಸೃಷ್ಠಿ ಪ್ರಕಾಶನದ ಸೃಷ್ಠಿ ನಾಗೇಶ ಇದ್ದರು.

 

 

 

Share This Article
error: Content is protected !!
";