ಬೆವರು ಸುರಿಸಿ ದುಡಿಯುವ ವರ್ಗಕ್ಕೆ ತಕ್ಕ ಪ್ರತಿಫಲ ಸಿಗಬೇಕು-ಡಾ. ಬಸವ ಕುಮಾರ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಠಿಣ ಪರಿಶ್ರಮದಿಂದ ಬೆವರನ್ನು ಸುರಿಸಿ ಯಾರು ದುಡಿಯುತ್ತಾರೋ ಅವರನ್ನ ಈ ನಾಡು ಅಥವಾ ಸಮಾಜ ತಕ್ಕ ಪ್ರತಿಫಲ ಗೌರವಧಾರಗಳನ್ನು ಕೊಡದ ಹೊರತು ಸುಧಾರಣೆ ಎನ್ನುವುದು ಕಷ್ಟದ ಮಾತು. ದುಡಿಯುವ ವರ್ಗಕ್ಕೆ ತಾರತಮ್ಯ, ನಿರ್ಲಕ್ಷ್ಯ, ಕೀಳಾಗಿ ಕಾಣುವ ಪ್ರವೃತ್ತಿ ತೊಲಗದೇ ಹೋದಲ್ಲಿ  ಶರಣರು ಕಂಡ ಸಮಾನತೆಯ ಸಮಾಜ ನಿರ್ಮಾಣವಾಗುವುದು ಕೇವಲ ಬಾಯುಪಚಾರದ ಮಾತಾಗುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಸ್ಮರಿಸಿಕೊಂಡರು.

ಶ್ರೀಗಳು ಇಲ್ಲಿನ  ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ (ಶರಣೋತ್ಸವ)ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

- Advertisement - 

ಪ್ರತಿಯೊಂದು ವೃತ್ತಿಯವರನ್ನ ಹನ್ನೆರಡನೇ ಶತಮಾನದಲ್ಲಿ ಸರ್ವ ಸಮಾನತೆಯಿಂದ ನೋಡಿಕೊಂಡ ಪರಿಣಾಮ ಅನುಭವ ಮಂಟಪ ದುಡಿಯುವ  ವೃತ್ತಿಯವರಿಂದ, ಲಿಂಗ ತಾರತಮ್ಯವಿರದೆ ಬೆರೆತು ಸರ್ವಸಮಾನತೆ ಎತ್ತಿ ತೋರಿಸಿ ಮಾದರಿಯಾಗಿದ್ದ ಕಾಲವದು. ಅದರಲೊಬ್ಬರು ನಮ್ಮ ಒಕ್ಕಲಿಗ ಮುದ್ದಣ್ಣ ಶಿವಶರಣರು. ಅವರದು ನೇಗಿಲ ಧರ್ಮ. ಈ ಕಾಯಕವನ್ನು ಮಾಡುತ್ತಲೇ ಅವರು  ಅನ್ನ ನೀಡುವ ಜೊತೆಗೆ ಬೌದ್ಧಿಕ ವಿಚಾರಗಳೊಡಗೂಡಿದ ವಚನಗಳನ್ನು  ರಚಿಸಿದ್ದಾರೆಂದು ತಿಳಿಸಿದರು.

ಈಗ ಅಂದಿನ ಎಲ್ಲ ವೃತ್ತಿ ಸೂಚಕ ಕಾಯಕ ಶಬ್ದಗಳೆಲ್ಲ ಜಾತಿಯಾಗಿ ಪರಿವರ್ತನೆಗೊಳ್ಳುತ್ತಿರುವುದು ವಿಷಾದನೀಯ. ಲಿಂಗಾಯತ ಇದೊಂದು ಆಚರಣೆ ಪ್ರಧಾನ ಶಬ್ಧ, ಜಾತಿ ರಹಿತವಾದದ್ದು. ಒಕ್ಕಲುತನ, ಲಿಂಗಾಯತ ಅವರ ನಡೆ ನುಡಿಗಳ ಆಚರಣೆಗಳ ಮೇಲೆ ಅವಲಂಭಿತವಾದ ಶಬ್ದಗಳೇ ವಿನಃ ,ಜಾತಿಗಳಲ್ಲ. ಆದರೆ ಇವತ್ತೇನಾಗಿದೆ ಎಂದರೆ ಬೇಸಾಯ ಮಾಡುವ ವೃತ್ತಿವೇ ಒಂದು ಜಾತಿ ಆಗಿದೆ. ಒಕ್ಕಲಿಗ ಮುದ್ದಣ್ಣ 12ನೇ ಶತಮಾನದಲ್ಲಿ ಒಂದು ವೃತ್ತಿಯಾಗಿ ಕೃಷಿ ಕೃತ್ಯ ಮಾಡಿಕೊಂಡಿದ್ದವರು.

- Advertisement - 

ಅಂದಿನ ಕಾಲದಲ್ಲಿ ಗುರು,ಲಿಂಗ, ಜಂಗಮ, ದಾಸೋಹ ,ಶಿವಯೋಗ, ಪ್ರಸಾದ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಹೀಗೆ ಅನೇಕ ಆಚರಣೆಯ ಪದ್ಧತಿಗಳಿದ್ದವು.  ಇದಾರಚೆಗೆ ಅತ್ಯಂತ ಮಹತ್ವದ ಕಾಯಕ ಎನ್ನುವ ಪರಿಕಲ್ಪನೆ ಆಚರಣೆಯಲ್ಲಿತ್ತು. ಅಲ್ಲಿ ಆಳ್ದರಸನಿಂದ ಆಳಿನವರೆಗೂ, ಗುರುವಿನಿಂದ ಶಿಷ್ಯನವರೆಗೂ ಒಟ್ಟಾರೆಯಾಗಿ ಕಾಯಕದಿಂದಲೇ ತಮ್ಮನ್ನ ಗುರುತಿಸಿಕೊಳ್ಳುವ ಪರಿಪಾಠವಿತ್ತು.

ಅದರಂತೆ ನಾವು ನಂಬಿರುವ ದೇವರಿಗೂ ಒಂದು ಕಾಯಕ ಅಂತ ಇತ್ತು.ಅಂದಿನ ಕಾಲದಲ್ಲಿ ಕಾಯಕ ಅಂದರೆ ಯಾರು ಸಹ ದುಡಿಯದೇ ತಿನ್ನುವ ಹಕ್ಕಿರಲಿಲ್ಲ. ಕುಂತುಣ್ಣುವವರಿಗೆ ಅಂದು ಮನ್ನಣೆ ಇರಲಿಲ್ಲ. ಎಲ್ಲರೂ ಸಹ ದುಡಿದುಣ್ಣುವ ವ್ಯವಸ್ಥೆಗೆ ಭಾಜನರಾಗಿದ್ದರು. ನಮ್ಮದು ದುಡಿದಣ್ಣುವ ಧರ್ಮ ಎಂದು ಬಸವಣ್ಣ ಮತ್ತವರ ಶರಣರು ಸಾರಿದ ಪರಿಣಾಮ ಕಾಯಕಕ್ಕೆ ಎಲ್ಲಿಲ್ಲದ ಮಹತ್ವ ಬಂದಿತ್ತು. ಇದರಿಂದ ದಾಸೋಹವೂ ನಿರಾತಂಕವಾಗಿ ನಡೆಯುತ್ತಿತ್ತು.

ಅದನ್ನು ಒಕ್ಕಲಿಗ ಮುದ್ದಣ್ಣರಾದಿಯಾಗಿ ಎಲ್ಲರೂ ನಿರ್ವಹಿಸುತ್ತಿದ್ದರು ಎಂದ ಶ್ರೀಗಳು ಇಂದು ಕಾಯಕ ಪ್ರಧಾನ ಸಮಾಜ ಕಡಿಮೆಯಾಗುತ್ತಿದೆ. ಶ್ರಮ, ಬೆವರು ರಹಿತ ದುಡಿಮೆಯ ಆರಾಧಕರಾಗಿ ಕುಂತು ತಿನ್ನುವ ಪ್ರವೃತ್ತಿಯಿಂದ ನಮ್ಮ ದೇಹ ರೋಗದ ಆಶ್ರಯವಾಗಿದೆ. ಈಗಿನ ಮಕ್ಕಳಿಗೆ ಅವರ ತಂದೆ ತಾಯಿಗಳು  ಅವರನ್ನ  ಎಲ್ಲಿಲ್ಲದ ಪ್ರೀತಿ, ಕಕ್ಕುಲತೆ ,ಅವರಿಗೆ ಯಾವುದೇ ನಿರಾತಂಕವಿಲ್ಲದೆ ಶ್ರಮರಹಿತ ,ಯಾವ ಪ್ರಾಪಂಚಿಕ ಜ್ಞಾನವು ಸೋಂಕದಂತೆ ,ಬರೀ ಪಠ್ಯ ಓದುವುದು, ಪದವಿ ಪಡೆಯುವ ಜೊತೆಗೆ  ಹೇರಳವಾಗಿ ಹಣ ನೀಡುವ ಉದ್ಯೋಗವನ್ನು ಪಡೆಯುವತ್ತಲೇ ತಮ್ಮ ಗಮನ ಹರಿಸಿದ್ದಾರೆ.

ಇಂದಿನ ವಿದ್ಯಾರ್ಥಿಗಳಿಗೆ ಪಠ್ಯ ಓದುವುದ ಬಿಟ್ಟು ಬೇರೆ ಹವ್ಯಾಸ ,ಇತರೆ ಕ್ಷೇತ್ರಗಳ ಒಡನಾಟ, ಹೋಗಲಿ ನಾವು ನಿತ್ಯ ಬಳಸುವ ಎಷ್ಟೋ ಶಬ್ದಗಳ ಪರಿಚಯವೇ ಇಲ್ಲ ಎಂತ ವಿಪರ್ಯಾಸ , ಗಂಭೀರ ಮತ್ತು ನಮ್ಮ ಪ್ರಮಾದವೂ ಹೌದಾಗಿದೆ. ನಮ್ಮಲ್ಲಿರುವ ಮೊಬೈಲ್ ನಲ್ಲಿ ಎಲ್ಲ ವಿಷಯಗಳು ಸಿಗಬಹುದು. ಆದರೆ ಬೆವರು ಸುರಿಸಿ ದುಡಿಯುವ ಮಾಹಿತಿ ಅದರಲ್ಲಿ ಇಲ್ಲ.

ನಾವು ಇದರಿಂದ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ನಮ್ಮ ಜೀವನ ಪರಿಪೂರ್ಣ ವಾಗುದು ನಾವು ಇಲ್ಲಿನ ಎಲ್ಲ ಆಗುಹೋಗುಗಳತ್ತ  ಗಮನ ಹರಿಸುವ, ಕೌಶಲ್ಯಗಳನ್ನು ತಮ್ಮ ಮಕ್ಕಳಿಗೆ ಕಲಿಸುವುದು ಒಳಿತು.

ಸಾಧ್ಯವಾದಷ್ಟು ಮಟ್ಟಿಗೆ ಅವುಗಳ ಪರಿಚಯ ಮಾಡಿಕೊಳ್ಳುತ್ತ ಪ್ರಯತ್ನ ಮಾಡಿದರೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯವಿದೆ. ಹಾಗೆ ದೇಹಕ್ಕೆ ಅನ್ನ ನೀಡುವ ರೈತ ಮತ್ತು ಅವರ ಶ್ರಮವನ್ನು ಗೌರವಿಸಬೇಕು . ಓದಿದವರು, ಕಲಿತವರು, ಜ್ಞಾನಿಗಳು, ಪಂಡಿತರು ವ್ಯವಸಾಯವನ್ನು ಮಾಡುವಂತಿಲ್ಲ ಎಂದು ಎಲ್ಲೂ ಹೇಳಿಲ್ಲ. ಬಿಡುವಿನ ಸಮಯದಲ್ಲಿ ಇದ್ದ ಜಾಗದಲ್ಲಿ  ಕೃಷಿಯತ್ತ ಗಮನ ಹರಿಸಿದರೆ ಈ ನಾಡು ಸಮೃದ್ಧ ಆರೋಗ್ಯ ಪೂರ್ಣ ಸಮಾಜವಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಕಾಳೇಗೌಡ ಬಸಪ್ಪ ಗುಡಸಿ ಸೇರಿದಂತೆ ಭಕ್ತರು,ಅಭಿಮಾನಿಗಳು, ಸಾರ್ವಜನಿಕರು ಎಸ್ ಜೆ ಎಂ ವಿದ್ಯಾ ಸಂಸ್ಥೆಯ ಕೆಲ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್ ಜೆಎಂ ಔಷಧ  ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಕಟ್ಟಿ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕಿ ಪೂಜಾ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಮೇಘನಾ ವಂದಿಸಿದರು.
ಉಳುವಾ ಯೋಗಿಯ ನೋಡಲ್ಲಿ ರೈತ ಗೀತೆ ಹಾಡುತ್ತಾ ಶಿವಶರಣ ಒಕ್ಕಲಿಗ ಮುದ್ದಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

 

 

 

 

Share This Article
error: Content is protected !!
";