ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
“ಗಮಕವು ಅತ್ಯಂತ ಶ್ರೇಷ್ಠ ಕಲೆಯಾಗಿದ್ದು, ರಾಮಾಯಣ ಕಾಲದಿಂದಲೂ ಪ್ರಚಲಿತದಲ್ಲಿದೆ. ನಮ್ಮ ಪುರಾತನ ಕಾವ್ಯ ಪ್ರಕಾರಗಳು ಇಂದಿಗೂ ಜೀವಂತವಾಗಿರಲು ಗಮಕ ಕಲೆ ಪೂರಕವಾಗಿದ್ದು, ಮೌಲ್ಯಯುತ ಸಮಾಜ ನಿರ್ಮಾಣದಲ್ಲಿ ಇದರ ಕೊಡುಗೆ ಅಪಾರ,” ಎಂದು ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಡಾ. ಭಾರ್ಗವಿ ಅಭಿಪ್ರಾಯಪಟ್ಟರು.
ನಗರದ ಜೆ.ಸಿ.ಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ 40ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಹಮ್ಮಿಕೊಂಡಿದ್ದ 32ನೇ ಮಾಸಿಕ ‘ಗಮಕ ಸಂಭ್ರಮ‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಮನಸೂರೆಗೊಂಡ ಸುಗಮ ಸಂಗೀತ:
ಕಾರ್ಯಕ್ರಮದ ಅಂಗವಾಗಿ ನಗರದ ‘ಸಂಧ್ಯಾ ರಾಗ ಸುಗಮ ಸಂಗೀತ ಶಾಲೆ‘ಯ ಪ್ರಾಚಾರ್ಯೆ ವಿದುಷಿ ಸಂಧ್ಯಾ ಜಯಶಂಕರ್ ಮತ್ತು ಅವರ 18 ಜನ ಶಿಷ್ಯವೃಂದದವರಿಂದ ಸುಗಮ ಸಂಗೀತ ಗಾಯನ ನಡೆಯಿತು. ‘ಗಣಪನೇ ತ್ರಿಜಗ ವಂದಿತನೇ‘, ‘ಮೂಡುತ ರವಿ ರಂಗು ಚೆಲ್ಲೈತೆ‘, ‘ಬಾ ಬಾ ಓ ಬೆಳಕೆ‘, ‘ಸೋಜುಗಾದ ಸೂಜು ಮಲ್ಲಿಗೆ‘ ಸೇರಿದಂತೆ ವಿವಿಧ ಕನ್ನಡ ಕವನಗಳು ಹಾಗೂ ಭಾವಗೀತೆಗಳ ಗಾಯನ ಸಭಿಕರನ್ನು ರಂಜಿಸಿತು.
ಗಾಯಕ ಕಲ್ಯಾಣ್ ಅವರ ಗಮಕ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ರಮಾದೇವಿ ವೆಂಕಣ್ಣಾಚಾರ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅನಂತಕೃಷ್ಣ, ಜಿಲ್ಲಾ ಪ್ರತಿನಿಧಿ ರಾಜೀವಲೋಚನ ಉಪಸ್ಥಿತರಿದ್ದರು.
ವಿದುಷಿ ಮೀನಾಕ್ಷಿ ಭಟ್ ಸ್ವಾಗತಿಸಿದರು. ಸಂಸ್ಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ಶಶಿಧರ್ ವಂದಿಸಿದರು. ಬಿ.ಎಲ್. ಉಮಾ ಕಾರ್ಯಕ್ರಮ ನಿರ್ವಹಿಸಿದರು.
ಏಪ್ರಿಲ್ 26ಕ್ಕೆ ಮುಂದಿನ ಗಮಕ ಕಾರ್ಯಕ್ರಮ-
ಮುಂಬರುವ ಮಾಸಿಕ ಗಮಕ ಕಾರ್ಯಕ್ರಮವು ಏಪ್ರಿಲ್ 26, 2026ರ ಭಾನುವಾರ ಸಂಜೆ 6 ಗಂಟೆಗೆ ಜೆ.ಸಿ.ಆರ್ ಬಡಾವಣೆಯ ಗಣಪತಿ ದೇವಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಅಂದು ಸಾಗರ ತಾಲ್ಲೂಕಿನ ಹೆಗ್ಗೋಡಿನ ಸಿ. ಅಶೋಕ ಕುಮಾರ್ ಅವರಿಂದ “ಅಳುಕುವರೆ ಸುಪ್ರತೆಯರ್ ಅಗ್ನಿಗೆ” ಎಂಬ ಕಾವ್ಯ ಭಾಗದ ವಾಚನ ಹಾಗೂ ಸಾಗರದ ವಕೀಲರಾದ ಶ್ರಾವ್ಯ ಅವರಿಂದ ವ್ಯಾಖ್ಯಾನ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

