ಡಾ‌.ಬಿ.ಆರ್.ಅಂಬೇಡ್ಕರ್ ಸರ್ವಕಾಲಕ್ಕೂ ಪ್ರಸ್ತುತ: ಕುಲಪತಿ ಡಾ.ಜಯಕರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಬಾಸಾಹೇಬ್ ಅಂಬೇಡ್ಕರ್‌ರವರ ಪುಸ್ತಕಗಳನ್ನು ಆಳವಾಗಿ ಅಧ್ಯಯನ ನಡೆಸದಿದ್ದರೆ ಅವರ ಪುಸ್ತಕಗಳು ದಕ್ಕುವುದಿಲ್ಲ. ಇಂದಿನ ಯುವ ಪೀಳಿಗೆ ಬಾಬಾಸಾಹೇಬರ ನೀರಿಕ್ಷೆಗಳನ್ನು ಪೂರೈಸಲು ಪ್ರತಿ ವಿಷಯವನ್ನು ವೈಜ್ಞಾನಿಕವಾಗಿ ಗ್ರಹಿಸಿ ಅರ್ಥ ಮಾಡಿಕೊಂಡು ಮನನ ಮಾಡುವ ಮೂಲಕ ಅವರ ಆಶಯಗಳನ್ನು ಎತ್ತಿ ಹಿಡಿಯಬೇಕು” ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳು ಪ್ರೊ.ಬಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ತರಭೇತಿ ಹಾಗೂ ವಿಸ್ತರಣಾ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ “ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಆಧುನಿಕ ಚಿಂತನೆಗಳು” ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು‌. ಬಾಬಾಸಾಹೇಬರು 21ನೇ ಶತಮಾನದ ಭವಿಷ್ಯಕ್ಕೆ ಮಾರ್ಗದಾತರಾಗಿದ್ದಾರೆ.

- Advertisement - 

ಸರ್ವಕಾಲಕ್ಕೂ ಸಲ್ಲುವಂತಹ ವ್ಯಕ್ತಿ, ವ್ಯಕ್ತಿತ್ವ ಅಂಬೇಡ್ಕರ್‌ರವರು. 3 ಸಾವಿರ ವರ್ಷಗಳ ಇತಿಹಾಸದಲ್ಲಿ ರಾಜರ ಆಳ್ವಿಕೆಯನ್ನು  ಅರಮನೆಯಿಂದ ಪ್ರಜೆಗಳ ಬಾಗಿಲಿಗೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ನೀಡಿದರು. ಶಿಕ್ಷಣವಂತ, ಹಣವಂತ, ಭೂ ಒಡೆಯರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ದಮನಿತರು, ಮಹಿಳೆಯರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗಕ್ಕೂ ಮತದಾನದ ಹಕ್ಕನ್ನು ಕಲ್ಪಿಸಿ ಪ್ರಜಾತಂತ್ರ ಆಳ್ವಿಕೆ ಜಾರಿಯಾಗುವಂತೆ ಮಾಡಿ ದೇಶದ ದಿಕ್ಸೂಚಿ ರೂಪಿಸಿದರು” ಎಂದು ತಿಳಿಸಿದರು.

ಬಾಬಾಸಾಹೇಬರ ಎಲ್ಲಾ ಹೋರಾಟಗಳು ಸಮಸ್ಯೆಗಳ ಮೂಲವನ್ನು ಪ್ರಶ್ನಿಸಿತ್ತು, ಆ ಚಿಂತನೆಯಲ್ಲೇ ದಲಿತ ಚಳುವಳಿ ಶುರುವಾಯಿತು. ಮಹಿಳಾ ಚಳುವಳಿ, ರೈತ ಚಳುವಳಿ, ವಿದ್ಯಾರ್ಥಿ ಚಳುವಳಿಗಳಿಗೆ ದಲಿತ ಚಳುವಳಿಗಳೆ ತಾಯಿ ಬೇರು. ಇಂದು ಭಾರತ ಸಂವಿಧಾನ ಇಕ್ಕಟ್ಟಿನಲ್ಲಿ ಸಿಲುಕಿದೆ, ಹೊಸಹಾತುಶಾಹಿ, ವೈದಿಕ ಮನಸ್ಥಿತಿಗಳು ಸಂವಿಧಾನದ ವಿರುದ್ದ ಹೋರಾಡುತ್ತಿದೆ.

- Advertisement - 

ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ ಹೊಸಹಾತುಶಾಹಿತನ ದೂರವಾಗಿಲ್ಲ. ಇಂದು ಮನುವಾದ ಉಚ್ಛ್ರಾಯ ಸ್ಥಿತಿ ತಲುಪಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್‌ರವರ ಪುಸ್ತಕ, ತತ್ವ ಚಿಂತನೆಗಳನ್ನು ಕಡ್ಡಾಯವಾಗಿ ಅಧ್ಯಯನ ನಡೆಸಬೇಕು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವುದನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಂವಿಧಾನ ಪೂರ್ಣ ಜಾರಿಗೊಳಿಸದಿದ್ದರೆ ಪ್ರಬುದ್ದ ಭಾರತದ ಬದಲಿಗೆ ವೈದಿಕ ಶಾಹಿ ಭಾರತ ನಿರ್ಮಾಣವಾಗಲಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ ಮಾತ‌ನಾಡಿ ” ಬಾಬಾಸಾಹೇಬ್ ಅಂಬೇಡ್ಕರ್‌ರವರು ವಿಶ್ವವೇ ಮೆಚ್ಚಿದ ಮಹಾಜ್ಞಾನಿ, ಅವರ ಜ್ಞಾನದ ಸಂಪತ್ತು ಸರ್ವಕಾಲಕ್ಕೂ ಪ್ರಸ್ತುತವಾಗಿರಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕಾನೂನು ನೀತಿಗಳನ್ನು ರೂಪಿಸಿ ದೇಶಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದ್ದಾರೆ.

ಅಂಬೇಡ್ಕರ್‌ರವರ ಚಿಂತನೆಗಳನ್ನು ಎಲ್ಲಾ ಆಯಾಮದಲ್ಲೂ ಅಧ್ಯಯನ ನಡೆಸಬೇಕು. ಇಂದಿನ ಯುವ ಪೀಳಿಗೆ ಅಂಬೇಡ್ಕರ್‌ರವರ ದೂರದೃಷ್ಟಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಅಂಬೇಡ್ಕರ್‌ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದರು.

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ದೇಶಕರಾದ ಡಾ. ಸಿ. ಸೋಮಶೇಖರ್ ಮಾತನಾಡಿ “ಅಂಬೇಡ್ಕರ್ ವಿಚಾರಗಳು ವಿದ್ಯಾರ್ಥಿಗಳಿಗೆ ತಲುಪಿಸುವ ದೃಷ್ಟಿಯಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂಬೇಡ್ಕರ್‌ರವರ ಕುರಿತಾದ ಸಂಶೋಧನೆ ಮತ್ತು ಅಧ್ಯಯನ  ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಗ್ರವಾಗಿ ನಡೆಯಬೇಕು. ಆ  ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಅಧ್ಯಯನ ಕೇಂದ್ರಗಳಿಗೆ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ತರಬೇತಿ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಸಾಬೀರ್ ಅಹನದ್ ಮುಲ್ಲಾ, ಜನಪದ‌ಕಲಾವಿದ ಡಾ.ಅಪ್ಪಗೆರೆ ತಿಮ್ಮರಾಜು, ಪ್ರೊ.ಎಚ್. ವಿಶ್ವನಾಥ್ ಸೇರಿದಂತೆ ಹಿರಿಯ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಅಂಬೇಡ್ಕರ್ ರವರ ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.

Share This Article
error: Content is protected !!
";