ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕುಷ್ಠರೋಗದ ಲಕ್ಷಣಗಳಿರಬಹುದು ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಜಿ.ಓ.ನಾಗರಾಜ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ದಡಿಯಲ್ಲಿ ತುರುವನೂರು ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆ ಸಮೀಕ್ಷಾ ಕಾರ್ಯ ಪುನರ್ ಪರಿಶೀಲಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಅವರು ಮಾತನಾಡಿದರು.
ಕುಷ್ಠ ರೋಗವು ನಿಧಾನವಾಗಿ ಹರಡುವ ಒಂದು ಸಾಂಕ್ರಾಮಿಕ ರೋಗ. ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಮಚ್ಚೆಗಳಿದ್ದು, ಮಚ್ಚೆಗಳ ಮೇಲೆ ಸ್ಪರ್ಶಜ್ಞಾನ ಇರುವುದಿಲ್ಲ, ತಂಪು ಬಿಸಿಯ ಅರಿವಾಗುವುದಿಲ್ಲ, ಕೂದಲು ಉದುರಿರುತ್ತವೆ. ತುರಿಕೆ ಇರುವುದಿಲ್ಲ ಇವು ಕುಷ್ಠರೋಗದ ಲಕ್ಷಣಗಳು. ಇಚ್ಛೆಯಿಂದ ಮಚ್ಚೆಯನ್ನು ಮುಚ್ಚಿಡಬೇಡಿ ಮುಚ್ಚಿಟ್ಟರೆ ಅಂಗವಿಕಲತೆ ಬರುತ್ತದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಶರತ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಮತ್ತು ಸ್ವಯಂಸೇವಕರು ಸಾರ್ವಜನಿಕರ ಮನೆ ಭೇಟಿ ಮಾಡಿ ಕುಷ್ಟರೋಗ ಸಮೀಕ್ಷಾ ಕಾರ್ಯ ಕೈಗೊಂಡಿದ್ದಾರೆ ಸೂಕ್ಷ್ಮ ಹಂತದ ಲಕ್ಷಣಗಳಿದ್ದಲ್ಲಿ ಪರೀಕ್ಷಿಸಿಕೊಂಡು ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕೆಂದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಷ್ಠರೋಗವು ಶಾಪದಿಂದ ಪಾಪದಿಂದ ಬರುವ ರೋಗವಲ್ಲ, ಒಂದು ಸೂಕ್ಷ್ಮಾಣು ಜೀವಿ ಬ್ಯಾಕ್ಟೀರಿಯಾದಿಂದ ಬರುತ್ತದೆ. ಶೀಘ್ರ ಪತ್ತೆ ತ್ವರಿತ ಚಿಕಿತ್ಸೆಯಿಂದ ಕುಷ್ಠ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಲಭ್ಯ ಇದೆ ಸಾರ್ವಜನಿಕರು ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದರು
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತ ಗೌಡ ಪೂಜಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಿಮ್ಮಣ್ಣ, ಆಶಾ ಕಾರ್ಯಕರ್ತೆ ಲಕ್ಷ್ಮಿದೇವಿ ಮತ್ತು ಸಾರ್ವಜನಿಕರು ಹಾಜರಿದ್ದರು.

