ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳಿಗೆ ನೂತನ 30 ದ್ವಿಚಕ್ರ ವಾಹನ ಹಾಗೂ 20 ನಾಲ್ಕು ಚಕ್ರ ವಾಹನಗಳನ್ನು ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಇಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಹಮ್ಮಿಕೊಳ್ಳಲಾಗಿದ್ದ ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳ ನೂತನ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವರು, ರಾಜ್ಯದಲ್ಲಿ ಎಸ್.ಸಿ/ಎಸ್ಟಿ ದೌರ್ಜನ್ಯ ಕಾಯ್ದೆಗಳನ್ನು ದಾಖಲಿಸಲು ಪ್ರತ್ಯೇಕವಾಗಿ ರಾಜ್ಯಾದಾದ್ಯಂತ ಸೃಜಿಸಲಾಗಿರುವ ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳಿಗೆ ವಾಹನಗಳನ್ನು ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಡಾ.ಅಲೋಕ್ ಮೋಹನ್, ಸಿ.ಐ.ಡಿ. ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ,
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆ. ಅರುಣ್ ಚಕ್ರವರ್ತಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿದೇಶಕ ಪಿ.ಹರಿಶೇಖರನ್, ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.