ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ಹಿಂದುಳಿದ ಬುಡಕಟ್ಟು ಸಮಾಜವಾದ, ವಿಶಿಷ್ಟ ಪರಂಪರೆ ಹೊಂದಿರುವ, ಅತ್ಯಂತ ಸಂಕಷ್ಟದಲ್ಲಿರುವ ಕುಂಚಿಟಿಗ ಸಮುದಾಯವನ್ನು ಕೇಂದ್ರದ ಓಬಿಸಿ ಮೀಸಲು ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲು ಕೇಂದ್ರದ ಮೇಲೆ ಒತ್ತಡ ತಂದು ಸಹಕಾರ ನೀಡುವಂತೆ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ.ಹನುಮಂತನಾಥಸ್ವಾಮೀಜಿ ಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಂಗಳೂರಿನ ಪದ್ಮನಾಭನಗರದಲ್ಲಿನ ದೇವೇಗೌಡ ಸ್ವಗೃಹಕ್ಕೆ ಭೇಟಿ ನೀಡಿ ಗೌರವಿಸಿ ಮನವಿ ಸಲ್ಲಿಸಿ ಮಾತನಾಡಿದ ಕುಂಚಶ್ರೀಗಳು ದೇಶ ಹಾಗೂ ರಾಜ್ಯಾದ್ಯಂತ 35 ಲಕ್ಷದಷ್ಟು ಸಂಖ್ಯೆ ಇದೆ. ವಿವಿಧ ಪ್ರದೇಶದಲ್ಲಿ ವಾಸಿಸುತ್ತಿರುವ ಕುಂಚಿಟಿಗ ಸಮಾಜವು ಗುಡ್ಡಗಾಡಿನ ಪ್ರದೇಶದಿಂದ ಬಂದವರು.
ಬಹುಪಾಲು ಕೃಷಿ ಹಾಗೂ ಹೈನುಗಾರಿಕೆ ಅವಲಂಬಿಸಿರುವ ಬಡವರು. ಈ ಸಮಾಜವು ಹಿಂದುಳಿದ ಬುಡಕಟ್ಟು ನೆಲಮೂಲಗಳನ್ನು ಹೊಂದಿದೆ. ಕುಂಚಿಟಿಗ ಸಮಾಜಕ್ಕೆ ಸ್ವಂತ ಹಾಗೂ ವಿಶಿಷ್ಟವಾದ ಪರಂಪರೆಯಿದ್ದು ಈಗಾಗಲೇ ಕುಲಶಾಸ್ತ್ರ ಅಧ್ಯಯನ ನಡೆಸಲಾಗಿದೆ.
ಪ್ರತಿಭಾವಂತ ಮಕ್ಕಳಿದ್ದು ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ನಮ್ಮನ್ನು ಹಿಂದುಳಿದ ವರ್ಗ (ಓಬಿಸಿ)ಮೀಸಲು ಪಟ್ಟಿಯಲ್ಲಿ ಸೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಕಳೆದ ಚುನಾವಣೆಯಲ್ಲೂ ಈ ಬಗ್ಗೆ ಭರವಸೆ ನೀಡಲಾಗಿತ್ತು. ಈಗ ಕಾಲ ಕೂಡಿ ಬಂದಿದ್ದು, ಕುಂಚಿಟಿಗ ಸಮಾಜವನ್ನು ಓಬಿಸಿ ಪಟ್ಟಿಗೆ ಸೇರಿಸಿದರೆ ಸಮಾಜದ ಪ್ರತಿಭಾವಂತ ಮಕ್ಕಳಿಗೆ ನ್ಯಾಯ ಸಿಗಲಿದೆ ಎಂದು ಸ್ವಾಮೀಜಿಗಳು ಆಗ್ರಹ ಮಾಡಿದರು.
ಸಾಮಾಜಿಕ, ಧಾರ್ಮಿಕವಾದ ಶ್ರೀಮಂತ ಪರಂಪರೆ ಹೊಂದಿರುವ ಸಮಾಜವು ರಾಜ್ಯಾದ ಹಲವು ಜಿಲ್ಲೆಗಳಲ್ಲಿ ಹಂಚಿ ಹೋಗಿದೆ. ಈಗಾಗಲೇ ರಾಜ್ಯದ 45 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 8 ಲೋಕಸಭಾ ಕ್ಷೇತ್ರದಲ್ಲಿ ಸಮಾಜ ನಿರ್ಣಾಯಕ ಪಾತ್ರ ವಹಿಸುತ್ತಿದೆ.
ಅಲ್ಲದೆ ರಾಜ್ಯ 15 ವಿಧಾನಸಭಾ ಕ್ಷೇತ್ರಗಳಲ್ಲಿ ಕುಂಚಿಟಿಗ ಸಮಾಜದವರೇ ಗೆಲ್ಲುವಂತ ಪರಿಸ್ಥಿತಿ ಇದೆ. ಆದರೆ ಬದಲಾದ ರಾಜಕೀಯ, ಆರ್ಥಿಕ ಸ್ಥಿತಿಗತಿಗಳಿಂದಾಗಿ ಕೇವಲ ಓರ್ವರು ಗೆಲುವು ಸಾಧಿಸುತ್ತಿದ್ದಾರೆ. ಮುಂದೆ ಈ ಸ್ಥಾನವೂ ಕೈ ತಪ್ಪುವ ಸಾಧ್ಯತೆ ಇದ್ದು ಸಮಾಜಕ್ಕೆ ತುರ್ತಾಗಿ ಅಗತ್ಯ ಮೀಸಲಾತಿ ನೀಡಬೇಕಾಗಿದೆ ಎಂದು ಸ್ವಾಮೀಜಿಗಳು ಮನವಿ ಮಾಡಿದರು.
ಶೈಕ್ಷಣಿಕ ಮತ್ತು ರಾಜಕೀಯ ಶಕ್ತಿಯೂ ಲಭಿಸಲಿದ್ದು ಸಮಾಜದ ಬಹುಕಾಲದ ಬೇಡಿಕೆಯಾದ ಓಬಿಸಿ ವರ್ಗೀಕರಣದಲ್ಲಿ ಕುಂಚಿಟಿಗ ಸಮಾಜವನ್ನು ಬೆಂಬಲಿಸುವಂತೆ ಕೋರಿದರು.
ಇದೇ ವೇಳೆ ಮಾಜಿ ಪ್ರಧಾನಿಗಳು ನಮ್ಮನ್ನು ಅತ್ಯಂತ ಪ್ರೀತಿಯಿಂದ ಗೌರವಿಸಿದ್ದು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದ್ದು ಕೇಂದ್ರದೊಂದಿಗೆ ಮಾತನಾಡಿ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು ಎಂದರು.
ಇದೇ ವೇಳೆ ಜೆಡಿಎಸ್ ಪಕ್ಷದ ಹಾಗೂ ಕುಂಚಿಟಿಗ ಸಮಾಜದ ಮುಖಂಡ ಲಗ್ಗೆರೆ ಅಂದಾನಪ್ಪ, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ ಉಪಸ್ಥಿತರಿದ್ದರು.