ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ರೋಗಿಗಳ ದಾಖಲೆ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಬಾರದು. ಒಂದು ವೇಳೆ ನಿರ್ಲಕ್ಷ್ಯದಿಂದ ದಾಖಲೆಗಳ ನಿರ್ವಹಣೆ ಮಾಡಿದರೆ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿ ಸದಸ್ಯ ಡಾ.ಎಚ್.ಎನ್.ರವೀಂದ್ರ ಎಚ್ಚರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅತಿಸಾರ ತಡೆಗಟ್ಟುವ ಅಭಿಯಾನ ಹಾಗೂ ರೋಗಿಗಳ ಕೇಸ್ ಶೀಟ್ ದಾಸ್ತಾವೇಜು ಮತ್ತು ದಾಖಲೆ ನಿರ್ವಹಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಮತ್ತು ಶಿಶು ಮರಣ ಪ್ರಕರಣದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಮೂನೆ ಭರ್ತಿ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿ ಹಲವಾರು ಸಮಸ್ಯೆಗಳಿಗೆ ಕಾರಣೀಭೂತರಾಗುತ್ತಾರೆ. ದಾಖಲಿಸುವ ಸಮಯದಲ್ಲಿ ಜಾಗರೂಕರಾಗಿ ಇರುಬೇಕು. ದಾಖಲೆಗಳನ್ನು ತಪ್ಪಾಗಿ ಬರೆಯುವುದು, ತಿದ್ದುವುದು ಹಾಗೂ ವೈಟ್ನರ್ ಬಳಸಿದರೆ, ನೀವು ತಪ್ಪಿತಸ್ಥರಾಗುತ್ತೀರಿ.
ದಾಖಲೆಗಳು ಸರಿಯಲ್ಲದಿದ್ದರೆ, ವೈದ್ಯರು ನಿರ್ಲಕ್ಷ ತೋರಿದರೆ, ಬಹಳಷ್ಟು ದಂಡ ತೆರಬೇಕಾಗುತ್ತದೆ. ಕಾನೂನಿನ ಸಂಘರ್ಷಕ್ಕೂ ಒಳಗಾಗಬೇಕಾಗುತ್ತದೆ. ನಿರ್ಲಕ್ಷ್ಯ ತೊರಿ ಪಶ್ಚಾತಪಾಕ್ಕೆ ಒಳಗಾಗುವ ಬದಲು, ಅಂದಿನ ಕೆಲಸವನ್ನು ಅಂದೇ ಜವಬ್ದಾರಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಸಮಸ್ಯೆಗಳಿಂದ ಪಾರಾಗಬಹುದು ಎಂದು ಡಾ.ಎಚ್.ಎನ್.ರವೀಂದ್ರ ಕಿವಿಮಾತು ಹೇಳಿದರು.
ಓಆರ್ ಎಸ್ ಹಾಗೂ ಜಿಂಕ್ ಮಾತ್ರೆ ವಿತರಣೆ:
ಜಿಲ್ಲೆಯಾದ್ಯಂತ ಜುಲೈ 16 ರಿಂದ 31 ವರೆಗೆ ಅತಿಸಾರ ತಡೆಗಟ್ಟುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಅತಿಸಾರ, ವಾಂತಿ, ಬೇದಿ ಕಂಡುಬಂದರೆ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ಕೊಡಿಸಬೇಕು. 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಓ.ಆರ್.ಎಸ್ 02 ಪಾಕೇಟ್ ಮತ್ತು ಅತಿಸಾರ ಉಂಟಾದ ಮಕ್ಕಳಿಗೆ ಜಿಂಕ್ ಮಾತ್ರೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ.ಪಾಲಾಕ್ಷಪ್ಪ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಅಭಿನವ್.ಡಿ.ಎಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾ.ಲತಾ, ಡಾ.ಬಸವಂತಪ್ಪ, ವೈದ್ಯರಾದ ಡಾ.ಪೃಥ್ವೀಶ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ತಜ್ಞ ವೈದ್ಯರು ಮತ್ತು ವೈದ್ಯಾಧಿಕಾರಿಗಳು, ಖಾಸಗಿ ವೈದ್ಯರು ಉಪಸ್ಥಿತರಿದ್ದರು.