ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿನ ದಿನಗಳಲ್ಲಿ ನಗರ ತೋಟಗಾರಿಕೆ ಹೆಚ್ಚಿನ ಪ್ರ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಹಸಿರು ಕ್ರಾಂತಿಯ ಅಳವಡಿಕೆಯ ಪರಿಣಾಮವಾಗಿ 1950ರ ದಶಕದಲ್ಲಿ 50 ಮಿಲಿಯನ್ ಟನ್ ಇದ್ದ ಆಹಾರ ಉತ್ಪಾದನೆ ಇಂದು 350 ಮಿಲಿಯನ್ ಟನ್ ಉತ್ಪಾದಿಸಿ ಸ್ವಾವಲಂಬನೆಯನ್ನು ಕಂಡುಕೊಂಡಿದ್ದೇವೆ ಎಂದು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥ ಹಾಗೂ ಸಹ ವಿಸ್ತರಣಾ ನಿರ್ದೇಶಕ ಡಾ: ಕೆ.ಪಿ. ರಘುಪ್ರಸಾದ್ ತಿಳಿಸಿದರು.
ಇಂದು ಕೃಷಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ವಿಸ್ತರಣಾ ನಿರ್ದೇಶನಾಲಯ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಆಶ್ರಯದಲ್ಲಿ “ಹಸಿರು ನಗರ ಆರೋಗ್ಯಯುತ ಜೀವನ” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ನಗರ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಪ್ರಸ್ಥುತ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿದ್ದು, ರಾಸಾಯನಿಕ ಮುಕ್ತ ತರಕಾರಿ, ವರ್ಷ ಪೂರ್ತಿ ನಮ್ಮ ಅಗತ್ಯಗಳಿಗೆ ತಕ್ಕಂತೆ ಹಣ್ಣು ಮತ್ತು ಸೊಪ್ಪುಗಳನ್ನು ಬೆಳೆಯಲು ಹಾಗೂ ಹೆಚ್ಚುತ್ತಿರುವ ನಗರೀಕರಣದಿಂದಾಗಿ ಸ್ಥಳದ ಕೊರತೆಯನ್ನು ನೀಗಿಸಲು ನಗರ ತೋಟಗಾರಿಕೆ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ರೈತ ತರಬೇತಿ ಸಂಸ್ಥೆ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ: ಸಿ. ನಾರಾಯಣಸ್ವಾಮಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯವರ ಪ್ರಕಾರ ಮನುಷ್ಯನ ಬೆಳವಣಿಗೆ ಎಂದರೆ ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಹಾಗೂ ಆರೋಗ್ಯ ಪೂರ್ಣ ಅಂಶಗಳನ್ನು ಒಳಗೊಂಡಿರುತ್ತದೆ.
ನಾವು ತಿನ್ನುವ ಆಹಾರವು ಔಷಧವಾಗಬೇಕು. ಹಿಂದಿನ ಕಾಲದಲ್ಲಿ ಅನುಸರಿಸುತ್ತಿದ್ದ ಆಹಾರ ಪದ್ಧತಿಗಳನ್ನು ಮತ್ತೆ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ತಿಳಿಸಿದರು.
ಜಿಕೆವಿಕೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕಿ ಡಾ. ಎಂ.ಶಾಲಿನಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಆಹಾರ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ವಿಷಮುಕ್ತ ಆಹಾರವನ್ನು ಉತ್ಪಾದಿಸಲು ನಗರ ತೋಟಗಾರಿಕೆಯು ಅತ್ಯಗತ್ಯವಾಗಿದೆ.
ಕನಿಷ್ಟ ವೆಚ್ಚದೊಂದಿಗೆ ಆದ್ಯತೆಯ ಮೇರೆಗೆ ವರ್ಷ ಪೂರ್ತಿ ತಾಜಾ ತರಕಾರಿ, ಹಣ್ಣು, ಔಷಧಿ ಸಸ್ಯಗಳನ್ನು ತಾವೇ ಉತ್ಪಾದಿಸಬಹುದಾಗಿದೆ ಎಂದು ತಿಳಿಸಿದರು.