ದಾರ್ಶನಿಕರ ಮಾನವೀಯ ಮೌಲ್ಯ ಬಿತ್ತುವ ಪ್ರಯತ್ನ- ಡಾ: ಕಾ.ತ. ಚಿಕ್ಕಣ್ಣ

News Desk

ದಾರ್ಶನಿಕರ ಮಾನವೀಯ ಮೌಲ್ಯ ಬಿತ್ತುವ ಪ್ರಯತ್ನ- ಡಾ: ಕಾ.ತ. ಚಿಕ್ಕಣ್ಣ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮನುಷ್ಯರಾಗಿ ಬದುಕೋಣ. ಮನುಷ್ಯರಾಗಿ ಬದುಕಲು ಅವಕಾಶ ಕೊಡುವುದು, ಉತ್ತಮ ಸಾಂಸ್ಕøತಿಕ ಪರಿಸರ ನಿರ್ಮಾಣ ಮಾಡುವುದು, ಕನ್ನಡ ಪರಂಪರೆಯ ವಿವೇಕವಾಗಿದ್ದು, ಕನಕದಾಸರು, ಬಸವಣ್ಣ ನವರು ಸೇರಿದಂತೆ ಅನೇಕ ಮಹನೀಯರ, ದಾರ್ಶನಿಕರ ಮಾನವೀಯ ಮೌಲ್ಯಗಳನ್ನು ಯುವ ಮನಸ್ಸುಗಳಲ್ಲಿ ಬಿತ್ತುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ಕಾ.ತ. ಚಿಕ್ಕಣ್ಣ  ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಡಾ. ಬಿ.ಆರ್. ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಮಂಗಳವಾರ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಕನಕ ಸಂಸ್ಕøತಿ ಸಂಚಲನ ಕನಕ ನಡೆ-ನುಡಿ ಉತ್ಸವಕಾರ್ಯಕ್ರಮವನ್ನು ತಂಬೂರಿಯನ್ನು ನುಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ಯುವ ಸಮುದಾಯದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಕನಕದಾಸರು, ತತ್ವಪದಕಾರರು,  ಕೀರ್ತನೆಕಾರರು, ದಾರ್ಶನಿಕರನ್ನಿಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ.  ಸಂತ ಕನಕದಾಸರ ಅಧ್ಯಯನ ಕೇಂದ್ರವು ಕನಕದಾಸರಿಗೆ ಮಾತ್ರ ಸೀಮಿತವಾಗದೇ  ವಚನ ಸಾಹಿತ್ಯ, ದಾಸ ಸಾಹಿತ್ಯದಂತೆ ಈಗಾಗಲೇ ತತ್ವಪದ ಸಮಗ್ರ ಸಾಹಿತ್ಯವನ್ನು 50 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದರು.

ಮಧ್ಯಕಾಲೀನ ಯುಗದಲ್ಲಿ ಯಾವುದೇ ಸಾಹಿತ್ಯ ಸೃಷ್ಠಿಯಾಗಲಿಲ್ಲ ಎಂದು ಸಾಹಿತ್ಯ ಚರಿತ್ರೆಕಾರರು ಮಧ್ಯಕಾಲೀನ ಯುಗವನ್ನು ಕತ್ತಲೆಯುಗ ಎಂದು ಕರೆಯುತ್ತಾರೆ. ಆದರೆ ವಾಸ್ತವ ಹಾಗೂ ವಿಸ್ಮಯ ಸಂಗತಿ ಎಂದರೆ ಮಧ್ಯಕಾಲೀನ ಯುಗದಲ್ಲಿ ವಿಫುಲವಾಗಿ ತತ್ವಪದಗಳು ಸೃಷ್ಠಿಯಾಗುವುದರ ಜತೆಗೆ ಬದುಕಿಗೆ ಮುಖಾಮುಖಿಯಾದವು ಎಂದು ತಿಳಿಸಿದ ಅವರು, ಕನಕದಾಸರು, ಕಿರ್ತನೆಕಾರರು, ತತ್ವ ಪದಕಾರರು, ದಾರ್ಶನಿಕರು ನಡೆದ ದಾರಿ ಹಾಗೂ ಮಾದರಿಯ ಕುರಿತು ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳಿಗೆ ಮನನ ಮಾಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

- Advertisement - 

ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ. ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಸಂಘರ್ಷಗಳೇ ಬದುಕಿನ ಬದಲಾವಣೆಗೆ ಕಾರಣ. ಕನಕದಾಸರಲ್ಲೂ ಅಂತಹ ಸಂಘರ್ಷ ಕಾಣಬಹುದಾಗಿದೆ ಎಂದು ತಿಳಿಸಿದ ಅವರು, ನಾಡನ್ನು ಸುತ್ತಿದ ಕನಕದಾಸರು ಬುದ್ಧನ ದಾರಿಯಲ್ಲಿ ನಡೆದವರು. ಹಾಗಾಗಿ ಅವರು ಸ್ವ ಹಿತಾಸಕ್ತಿ ಇಲ್ಲದೇ  ಸಮಾಜದ ಚಿಂತನೆ ಹಾಗೂ ಸಮಾಜದ ಬದಲಾವಣೆಗಾಗಿ ಜನರ ಬಳಿ ತೆರಳಿ ಅಲ್ಲಿ ಕಂಡಂತಹ ಅನುಭವಗಳನ್ನು ಬರವಣಿಗೆ, ಹಾಡು, ಮಾತು ಹಾಗೂ ಚರ್ಚೆ ಮಾಡುತ್ತಾರೆ ಇವುಗಳ ಫಲವೇ ಕನಕ ಸಾಹಿತ್ಯ, ಕನಕ ಚಿಂತನೆಯಾಗಿದೆ ಎಂದರು.

ಕನಕದಾಸರನ್ನು ಏಕಮುಖವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಕನಕದಾಸರ ಚಿಂತನೆ ಬಹುಮುಖಿ ಹಾಗೂ ಬಹುತ್ವದಿಂದ ಕೂಡಿದೆ. ಹಾಗಾಗಿ ಕನಕ ಭಕ್ತನೂ ಹೌದು, ಸಂತನೂ ಹೌದು. ಎಲ್ಲದಕ್ಕಿಂತ ಮುಖ್ಯವಾಗಿ ವಿಚಾರವಾದಿ ಹಾಗೂ ವೈಚಾರಿಕತೆ ಮೂಲಕ ಸಮಾಜಕ್ಕೆ ಬೆಳಕು ನೀಡಲು ಅಲೋಚನೆ ಮಾಡಿದವರು. ಕನಕ ಪ್ರಜ್ಞೆ ಎಂಬುದು ವಿವೇಕದ ಪ್ರಜ್ಞೆಯಾಗಿದೆ. ಸಾಹಿತ್ಯ, ವಚನ, ಕೀರ್ತನೆ, ತತ್ವಪದಗಳನ್ನು ಓದಿದರೆ ನಮ್ಮಲ್ಲಿ ವಿವೇಕ, ಅರಿವು ಮೂಡಲಿದೆ ಎಂದರು.

 

ಸರ್ಕಾರಿ ಕಲಾ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ. ತಾರಿಣಿ ಶುಭದಾಯಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  
ಕನಕ ನಡೆ-ನುಡಿ ಉತ್ಸವ ಕಾರ್ಯಕ್ರಮದ ಅಂಗವಾಗಿ ಕನಕ ಕಿರು ಚಿತ್ರ ಪ್ರದರ್ಶನ ನಡೆಯಿತು. ಕನಕ ಸಂಸ್ಕøತಿ ಸಂಚಲನ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಪುರಸ್ಕಾರ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಬಿ.ಸುರೇಶ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಮಂಜುನಾಥ, ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮ್ಯುಯಲ್ ಸೇರಿದಂತೆ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಯಶೋಧರಮ್ಮ ಬೋರಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆಯ ಹೆಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಿರಿಯೂರಿನ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು,  ವಿದ್ಯಾರ್ಥಿಗಳು ಇದ್ದರು.

 

Share This Article
error: Content is protected !!
";