ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಅಲ್ಪಸಂಖ್ಯಾತ ಪ್ರತಿಭೆಗಳನ್ನು ಗುರುತಿಸಲು ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ” ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಅಲ್ಪಸಂಖ್ಯಾತ ಪ್ರತಿಭೆಗಳನ್ನು ಗುರುತಿಸಲು ಪಕ್ಷದ ಅಲ್ಪಸಂಖ್ಯಾತರ ಮೋರ್ಚಾ ಆಯೋಜಿಸಿರುವ ‘ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ‘ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ದೇಶಾದ್ಯಂತ ಅಲ್ಪಸಂಖ್ಯಾತ ಯುವಕರ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಲು “ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ”ಯನ್ನು ಘೋಷಿಸಿದೆ.
ಈ ಪ್ರಶಸ್ತಿಯು ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಅಸಾಧಾರಣ ಕೌಶಲ್ಯ ಮತ್ತು ಉದ್ಯಮಶೀಲತಾ ಮನೋಭಾವವನ್ನು ಸಾಕ್ಷೀಕರಿಸಿ ಸಾಧಿಸಿರುವ ಅಲ್ಪಸಂಖ್ಯಾತ ಯುವಕರನ್ನು ಗೌರವಿಸುವ ಗುರಿಯನ್ನು ಹೊಂದಿದ್ದು, ಪ್ರತಿ ರಾಜ್ಯದಿಂದ 7 ಯುವಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
ಪ್ರಸ್ತುತ ಮೋರ್ಚಾದ ವೆಬ್‌ಸೈಟ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಅರ್ಹ ಪ್ರತಿಭೆಗಳು ನೋಂದಾಯಿಸಿಕೊಳ್ಳಬೇಕೆಂದು ವಿಜಯೇಂದ್ರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ, ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಖಜಾಂಚಿ ಡಾ. ಮೋಸಿನ್ ಎನ್. ಎಫ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಅನಿಲ್ ಥಾಮಸ್, ಅಲ್ಪಸಂಖ್ಯಾತ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಅಜಿಮ್, ಮುಖಂಡರಾದ ಮುಜಾಮಿಲ್ ಅಹಮದ್ ಬಾಬು, ಸೈಯದ್ ಸಲಾಂ, ಸೇರಿದಂತೆ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

