ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಕರಿಯಪ್ಪ ಮಾಳಿಗೆ ರವರನ್ನು ಸನ್ಮಾನಿಸಲಾಯಿತು. ಸನ್ಮಾನಿಸಿದ ನಂತರ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ನಾನು 1981 ರಿಂದ 84 ರವರಿಗೆ ಈ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಿದೆ. ಅಂದು ಕಾಲೇಜಿನಲ್ಲಿ 3500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಹಾಗಾಗಿ ಜಿಲ್ಲೆಯ ಪ್ರತಿಷ್ಠಿತ ಬಡ ವಿದ್ಯಾರ್ಥಿಗಳ ವ್ಯಾಸಂಗದ ಕಾಲೇಜು ಎಂಬ ಕೀರ್ತಿ ಪಡೆದಿತ್ತು.
ಅಂದು ಪ್ರೊ. ಪಾಲಯ್ಯ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಅರ್ಥಶಾಸ್ತ್ರ ವ್ಯಾಸಂಗ ಮಾಡಿ ಚಿತ್ರದುರ್ಗಕ್ಕೆ ಬಂದಾಗ ನನ್ನನ್ನು ನೋಡುವುದಕ್ಕೆ ಜನರು ಮನೆ ಹತ್ತಿರ ಬರುತ್ತಿದ್ದರು ಹಾಗೂ ನನ್ನನ್ನ ಮೆರವಣಿಗೆ ಮಾಡಿದ್ದರು ಎಂದು ತರಗತಿಯಲ್ಲಿ ಹೇಳುತ್ತಿದ್ದರು. ಆಗಾಗಿ ಅವರನ್ನು ” ಟೈಗರ್ ಆಫ್ ಎಕನಾಮಿಕ್ಸ್ ”ಎಂದು ಜಿಲ್ಲೆಯಲ್ಲಿ ಕರೆಯುತ್ತಿದ್ದರು .
ಅವರು ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು ಸಹ ಆಗಿದ್ದರು. ನಾನು ಪ್ರೊಫೆಸರ್ ಪಾಲಯ್ಯ ರವರ ಅರ್ಥಶಾಸ್ತ್ರ ಬೋಧನೆಯನ್ನು ಕೇಳಿ ಅವರ ಮಾರ್ಗದರ್ಶನ ದಡಿಯಲ್ಲಿ ನಾನು ಸಹ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರಎಂ.ಎ ಸ್ನಾತಕೋತರ ಪದವಿ ಪಡೆದು ಅವರ ಆಶೀರ್ವಾದದಿಂದ ನಾನು ಸಹ ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅರೆ ಕಾಲಿಕ ಉಪನ್ಯಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು.ನಂತರ ನಮ್ಮ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿತು ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ಡಾ. ಗುರುನಾಥ್ ಮಾತನಾಡಿ ಡಾ. ಕರಿಯಪ್ಪ ಮಾಳಿಗೆ ನನ್ನ ಆತ್ಮೀಯರು ಹಾಗೂ ಮಾರ್ಗದರ್ಶಕರು ಇವರು ಉತ್ತಮ ಜನಪದ ಸಾಹಿತಿ, ಬಂಡಾಯ ಸಾಹಿತಿ, ಚಿಂತಕರು ವಿಮರ್ಶಕರು ಲೇಖಕರು ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿದ ನೂತನ ಪ್ರಾಚಾರ್ಯ ಡಾ. ಕರಿಯಪ್ಪ ಮಾಳಿಗೆ ಮಾತನಾಡಿ. ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಫಲಿತಾಂಶ ಹೆಚ್ಚಿಸಿ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕಾಲೇಜಿನ ಕೀರ್ತಿ ಹೆಚ್ಚಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯಶಾಸ್ತ್ರ ವೇದಿಕೆಯ ಅಧ್ಯಕ್ಷ ಡಾ. ಮೋಹನ್ ಮತ್ತು ಪ್ರಾಧ್ಯಾಪಕ ಸುರೇಶ್ ಇತರರು ಉಪಸ್ಥಿತರಿದ್ದರು.

