ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಮುದಾಯಗಳ ಉಪ ಸಂಸ್ಕೃತಿಗಳ ಕಣಜ. ಜಿಲ್ಲೆಯ ವೈವಿಧಮಯವಾದ ಸಾಂಸ್ಕೃತಿಕ ಲೋಕ ದೇಸಿತನದ ಸಂಪತ್ತು. ಮದಕರಿ ವಂಶದ ಪಾಳೇಗಾರರ ಸುಧೀರ್ಘ ಆಳ್ವಿಕೆಯ ಆಗು-ಹೋಗುಗಳ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇರುವ ಪಳೆಯುಳಿಕೆಗಳ ಕುರುಹುಗಳು ಸಾಕ್ಷಿಗಲ್ಲುಗಳಾಗಿವೆ. ಬಯಲು ಸೀಮೆಯಾದ ಚಿತ್ರದುರ್ಗ ಜಿಲ್ಲೆಯ ಬಹುಪಾಲು ಪ್ರದೇಶ ಪ್ರಕೃತಿಯ ಅವಕೃಪೆಯಿಂದ ನಿರಂತರವಾಗಿ ಬರದ ಸುಳಿಗೆ ಸಿಲುಕುತ್ತಲೇ ಇದೆ. ಇಂತಹ ಜಾನಪದೀಯ, ಐತಿಹಾಸಿಕ ಮತ್ತು ಭೌಗೋಳಿಕತೆಯುಳ್ಳ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ ಪಾಳ್ಯ ಇವೆಲ್ಲವುಗಳ ಸಾಂದ್ರರೂಪಕವಾದ ಒಂದು ಸಣ್ಣ ಹಳ್ಳಿ.
ಸ್ವಾತಂತ್ರ್ಯೋತ್ತರದ ಅರುಣೋದಯದ ಕಾಲದಲ್ಲಿ ದೇಶದ ಎಲ್ಲ ಹಳ್ಳಿಗಳು ಸಾಮಾನ್ಯವಾಗಿ ರಸ್ತೆ, ಬೀದಿ ದೀಪ, ಅಂಚೆ, ಶಾಲೆ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಬಯಸುವ, ನೋಡುವ ಸಂಕ್ರಮಣ ಕಾಲ. ಜಾತಿ ವ್ಯವಸ್ಥೆ ದಟ್ಟವಾಗಿ ನೆಲೆಯೂರಿರುವ ಹಳ್ಳಿಗಳ ಪರಿಸರದಲ್ಲಿ. ಇದನ್ನು ಮೀರಿಸುವ ಭಾವಸೇತುಗಳ ಬಂಧುತ್ವದ ನೆರಳಿದೆ. ಆದರೆ ಈ ಕಾರುಣ್ಯದ ಕೃತಕ ಸಂಬಂಧಗಳು ಕೇವಲ ಮಾತಿನ ರೂಪದಲ್ಲಷ್ಟೇ ಇರುವುದು ವಾಸ್ತವ. ದುಡಿದು ಉಣ್ಣುವ ಶ್ರಮತತ್ವ ಸ್ಥಾಯಿಯಾಗಿರುವ ಹಳ್ಳಿಗಳು ಅಂಬಲಿ, ಅರಿವೆ, ಸೂರುಗಳಿಗಾಗಿ ತಲೆಮಾರುಗಳನ್ನೆ ದಾಟಿ ಬಂದಿವೆ.
ಈ ಹೊತ್ತಿನ ನವ ಸಿರಿಧಾನ್ಯಗಳು ಆ ಕಾಲದಲ್ಲಿ ಬಡವರ ಶಕ್ತಿ ಮತ್ತು ಆರೋಗ್ಯವನ್ನು ಕಾಪಿಟ್ಟುಕೊಂಡು ಬಂದ ದೈವ ಧಾನ್ಯಗಳು. ಆರಕ, ನವಣೆ, ಕೊರಲೆ, ಹುರುಳಿ ರಾಗಿ ಜೋಳ ಮುಂತಾದವು ನಿತ್ಯ ಬಳಕೆಯ ಪ್ರಧಾನ ಧಾನ್ಯಗಳಾಗಿದ್ದವು. ನೆಲ್ಲಕ್ಕಿ ಅನ್ನ ಹಬ್ಬ ಹರಿದಿನಗಳಲ್ಲಿ ಮಾತ್ರ ಉಣ್ಣುವ ಬಡತನದ ಹಳ್ಳಿಗಳು ಬಹುಪಾಲು. ವಾರದ ಸಂತೆ ಮಾಡುವ ಪರಿ, ’ಸಾರು’ಗೆ ಹಾಕುವ ಒಗ್ಗರಣೆಗಳು ಗುಡಿಸಲು, ಮೋಟು ಗೋಡೆಗಳ ಅಂಗಳದಾಚೆ ಬಹುದೂರ. ಇಂತಹ ಪರಿಸರದಲ್ಲಿ ಹುಟ್ಟಿ ಬೆಳೆದ ರವೀಂದ್ರನಾಥರವರಿಗೆ ಅಷ್ಟೆ ಅಲ್ಲ ಶಾಲೆಗೆ ಬರುವ ದೇಶದ ಎಲ್ಲಾ ಹಳ್ಳಿ ಮಕ್ಕಳಿಗೂ ಶಾಲೆಗಳಲ್ಲಿ ಮಧ್ಯಾಹ್ನ ಕೊಡುತ್ತಿದ್ದ ಅಮೇರಿಕಾದ ಗೋಧಿಯ ದೊಡ್ಡ ರವೆ ಉಪ್ಪಿಟ್ಟು ಮಹಾರಾಜರ ಮೃಷ್ಟಾನ್ನಕ್ಕಿಂತಲೂ ಮಿಗಿಲು ಎಂದೆ ಪರಿಭಾವಿಸಿಕೊಂಡು ಕಣ್ಣು ಬಾಯಿ ಬಿಟ್ಟುಕೊಂಡು ತಿನ್ನುತ್ತಿದ್ದ ಕಾಲ.
ಉಪ್ಪಿಟ್ಟಿನ ಸೆಳೆತಕ್ಕೆ ಅಸಂಖ್ಯ ಮಕ್ಕಳು ಶಾಲೆಗೆ ಬರುತ್ತಿದ್ದುದುಂಟು. ಜಾತಿ ಓಣಿಗಳಿಂದ ಶಾಲೆಯ ಮೈದಾನಕ್ಕೆ ಬಂದ ಮಕ್ಕಳೆಲ್ಲ ಓದುತ್ತಾ ಜಾತಿಗಳ ಮೀರಿ ಸಖ್ಯ ಬೆಳೆಸಿಕೊಂಡು ಹಳ್ಳಿಗಳಿಗೆ ಘನತೆ ತಂದವರು. ಸ್ನೇಹ ಸಂಬಂಧಗಳಿಗೆ ಒಂದು ಮೌಲ್ಯ ತಂದವರಲ್ಲಿ ಹಳ್ಳಿಯ ಒಕ್ಕಲು ಮತ್ತು ಒಟ್ಟಿಗೆ ಕಲಿತ ಶಾಲೆಯ ಸಹಪಾಠಿಗಳ ವೃಂದದವರು ಪ್ರಮುಖರು.
ತಂದೆ ಶಂಕರಪ್ಪ ಮತ್ತು ತಾಯಿ ರಂಗಮ್ಮನವರು ತಮ್ಮ ಮಗನಿಗೆ ಮುದ್ದಾದ ರವೀಂದ್ರನಾಥ ಎಂದು ಹೆಸರಿಟ್ಟಿದ್ದು ವಿಶೇಷವೇ ಸರಿ.
ದೇಶದ ಉದ್ದಗಲಕ್ಕೂ ನೀರು ಮತ್ತು ರಕ್ಷಣೆಯ ಸ್ಥಳಗಳಲ್ಲಿ ಕೃಷಿ ಬಳಗದ ಬಹು ಜನರು ನೆಲೆ ನಿಂತ ಪ್ರದೇಶಗಳು ಗ್ರಾಮಗಳಾಗಿ ರೂಪುಗೊಂಡಿರುವುದನ್ನು ಕಾಣುತ್ತೇವೆ. ಅದೇ ರೀತಿ ಹಳ್ಳಿಗಳ ಅನತಿಗಳ ದೂರದಲ್ಲಿ ಜಮೀನುವುಳ್ಳ ಬಣದವರು, ಆಸುಪಾಸಿನಲ್ಲಿ ನೆಲೆ ನಿಂತ ವಸತಿ ಸ್ಥಳಗಳು ಪಾಳ್ಯಗಳಾಗಿವೆ.
ಇದೇ ರೀತಿ ಖಂಡೇನಹಳ್ಳಿಯ ಬಳಿ ಪಾಳ್ಯ ಸೃಜಿಸಿ, ತದನಂತರದಲ್ಲಿ ಕಂದಾಯ ಇಲಾಖೆಯಲ್ಲಿ ಮಾನ್ಯವಾಗಿದೆ. ಇಂತಹ ಪರಿಸರದಲ್ಲಿ ಬೆಳೆಯುತ್ತಾ ಪಾಳ್ಯದಿಂದ ಹಳ್ಳಿಯ ಪ್ರಾಥಮಿಕ ಶಾಲೆಗೆ ಓಡಾಡುತ್ತಲೆ ಓದುತ್ತಾ ಹೋದ ರವೀಂದ್ರನಾಥರವರು ತಮ್ಮ ಮೂಲ ಮನಸ್ಸಿನಲ್ಲಿರುವ ಓದುವ ಸಂಕಲ್ಪವನ್ನು ಕಾಪಿಟ್ಟುಕೊಂಡವರು ಏಕಲವ್ಯನಂತೆ. ಕೌಟುಂಬಿಕ ಹಾಗೂ ಪರಿಸರದ ಸಾರ್ವಜನಿಕ ಒತ್ತಡದಲ್ಲಿ ಓದುವ ಸಂಕಲ್ಪ ಮುಕ್ಕಾಗದಂತೆ ಸಂರಕ್ಷಣೆ ಮಾಡಿಕೊಂಡು ಬಂದ ಘನವಂತ ವ್ಯಕ್ತಿಯೇ ಇಂದು ಶ್ರೇಷ್ಠ ಮನುಷ್ಯ ಮತ್ತು ಅಪ್ರತಿಮ ಹೃದ್ರೋಗ ತಜ್ಞರಾಗಿರುವ ಡಾ. ಕೆ.ಎಸ್.ರವೀಂದ್ರನಾಥ್‌ರವರು.
ಓದಲು ಪೂರಕವಲ್ಲದ ಪರಿಸ್ಥಿತಿಯಲ್ಲಿ ಆರ್ಥಿಕ ಬಿಕ್ಕಟ್ಟುಗಳ ನಡುವೆ ಕುಸಿಯದೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದಲ್ಲಿ ಪ್ರೌಢಶಾಲೆ ಮತ್ತು ಚಿತ್ರದುರ್ಗದಲ್ಲಿ ಪಿಯುಸಿ ವ್ಯಾಸಂಗ ಮಾಡಿ, ಉನ್ನತ ತೇರ್ಗಡೆಯೊಂದಿ, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆದದ್ದು ರವೀಂದ್ರನಾಥರವರ ಶೈಕ್ಷಣಿಕ ಮಹತ್ತರ ಘಟ್ಟ ಮತ್ತು ಅದ್ವಿತೀಯ ಸಾಧನೆಯ ದ್ಯೋತಕ.
ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಡಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಾ.ಕೆ.ಎಸ್.ರವೀಂದ್ರನಾಥ್‌ರವರು ತಮ್ಮ ಶೈಕ್ಷಣಿಕ ವ್ಯಾಸಂಗದಲ್ಲಿ ಕಲಿಸಿದ ಮಾಸ್ತರುಗಳನ್ನು ಪೂಜ್ಯ ಭಾವನೆಯಿಂದ ನೆನೆಯುತ್ತಾ, ನಮನಗಳನ್ನು ಸಲ್ಲಿಸುತ್ತಾ ಧನ್ಯತಾಭಾವ ತುಂಬಿಕೊಳ್ಳುವ ಶೀಯುತರು ವಿದ್ಯಾರ್ಥಿ ಲೋಕಕ್ಕೊಂದು ಮಾದರಿ ವಿದ್ಯಾರ್ಥಿಯಾದವರು ಮತ್ತು ಉನ್ನತ ವ್ಯಕ್ತಿತ್ವ ಹೊಂದಿದವರು. ಇವರ ಸಂಶೋಧನಾ ಪ್ರವೃತ್ತಿ ಮತ್ತು ಬೋಧನೆಯ ಪ್ರೀತಿ ಹಾಗೂ ಸೇವೆ ಮಾಡುವ ಒರತೆಯೊಂದಿಗೆ ಕಡು ಮಾನವೀಯತೆಯ ವ್ಯಕ್ತಿತ್ವದೊಂದಿಗೆ ಜೀವನ ಮೌಲ್ಯಗಳನ್ನು ಸಂಪನ್ನತೆ ಮಾಡಿಕೊಂಡ ಯಶಸ್ವಿ ಸಾಧಕರಾದವರು.
ಬಳ್ಳಾರಿ ಮತ್ತು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ವೈದ್ಯರಾಗಿ, ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ಜಯದೇವ ಮತ್ತು ವಿಕ್ಟೋರಿಯಾ ಆಸ್ಪತೆಯಲ್ಲಿ ಅಪಾರ ಸೇವೆ ಸಲ್ಲಿಸಿ, ಮರಳಿ ಜಯದೇವ ಹೃದಯಾಲಯ ಆಸ್ಪತೆಗೆ ಬಂದ ಪರಿ ತವರು ಮನೆಗೆ ಬಂದ ಸಂತಸದ ವಾತ್ಸಲ್ಯದ ಸೊಗಸಿನಂತೆ ಡಾ.ಕೆ.ಎಸ್. ರವೀಂದ್ರನಾಥ್‌ರವರಿಗೆ ಭಾಸವಾದದ್ದು ವಾಸ್ತವ.
ಜೀವ, ಜೀವನ ವಿಕಾಸಗೈವ ಸಂಜೀವಿನಿ ರೂಪಕ ಶಕ್ತಿ ಹಾಗೂ ಅಂತರರಾಷ್ಟ್ರೀಯ ಶ್ರೇಷ್ಠ ಹೃದ್ರೋಗ ತಜ್ಞರ ಪ್ರಮುಖರಲ್ಲಿ ಓರ್ವರಾದ ಡಾ. ಕೆ.ಎಸ್. ರವೀಂದ್ರನಾಥರವರು ಸಾಮಾಜಿಕ ಜವಾಬ್ದಾರಿವುಳ್ಳ ಅಪರೂಪದ ವೈದ್ಯರಲ್ಲಿ ಅತ್ಯುತ್ತಮರು. ಸಮಸಮಾಜ ಪರಿಕಲ್ಪನೆಯ ಜನಪರ ವೈದ್ಯರಾದ ಡಾ.ಕೆ.ಎಸ್.ಆರ್.ರವರು ಸಾತ್ವಿಕ ಸಂಪನ್ನತೆಯ ತಾಯ್ತನ ಮನೋಧರ್ಮದವರು. ದಣಿವರಿಯದೇ ಸೇವೆಗೈವ ಅವರ ಸದಾ ಮಂದಹಾಸದ ಸಂಪ್ರೀತಿ ಬಳಲಿದ ತನುಮನಗಳಿಗೆ ಚೈತನ್ಯದ ಸ್ಪರ್ಶಭಾವವಿದ್ದಂತೆ.
ಸಮಾಜ ಹಿತದ ದೂರದರ್ಶಿತ್ವವುಳ್ಳ ಧೀರೋದಾತ್ತ ವ್ಯಕ್ತಿತ್ವದ ಡಾ. ಕೆ.ಎಸ್. ರವೀಂದ್ರನಾಥ್‌ರವರ ಅಪ್ರತಿಮ ಪ್ರತಿಭೆಗೆ ಮತ್ತು ಕರ್ತವ್ಯ ಬದ್ಧತೆಗೆ ಸಂದ ಗೌರವದ ಉನ್ನತ ಅವಕಾಶವೆಂದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದ ಹಿರಿಮೆ. ಆ ಸ್ಥಾನ ಲಭ್ಯವಾದದ್ದು (೨೦೧೪). ರಾಜ್ಯದಾದ್ಯಂತವಿರುವ ೬೨೮ ಆರೋಗ್ಯ ವಿಜ್ಞಾನಗಳ ಮಹಾ ವಿದ್ಯಾಲಯಗಳ ಭೌತಿಕ ಮತ್ತು ಬೌದ್ಧಿಕ ಸುಧಾರಣೀಕೃತ ಉನ್ನತೀಕರಣದೆಡೆಗೆ ಕೊಂಡೊಯ್ಯುವ ನೈತಿಕ ಜವಾಬ್ಧಾರಿಯನ್ನು ಸಾರ್ಥಕವಾಗಿ ನಿರ್ವಹಿಸಿದ ಕೀರ್ತಿ ಶ್ರೀಯುತರದ್ದು.
ಅಹರ್ನಿಶಿ ಆವಿಷ್ಕಾರದ ಪ್ರಕ್ರಿಯೆಯಲ್ಲಿರುವ ವೈದ್ಯಕೀಯ ಕ್ಷೇತ್ರದಲ್ಲಿ ನಿಧಾನ ಗತಿ ಸಲ್ಲದು ಎಂದು ೫೦೦ ಕೋಟಿ ದತ್ತಿ ನಿಧಿ ಸ್ಥಾಪಿಸಿ ಇದರಿಂದ ಉತ್ಪನ್ನವಾಗುವ ಬಡ್ಡಿ ಮೊತ್ತದಿಂದ ಸಂಶೋಧಕರಿಗೆ ನಿರಂತರವಾಗಿ ನೆರವು ಲಭ್ಯವಾಗಲು ಕಾರಣೀಭೂತರಾದವರು. ಯಾವುದೇ ವಿಶ್ವವಿದ್ಯಾನಿಲಯಗಳ ಮೂಲ ಆಶಯ ವಿದ್ಯಾರ್ಥಿ ಕೇಂದ್ರಿತವಾದ ಮುನ್ನೋಟವನ್ನು ಅನುಸರಿಸುವುದು ಸೂಕ್ತ ಎಂಬ ಅಭಿಮತ ಶ್ರೀಯುತರದ್ದು. ಪ್ರಾಮಾಣಿಕತೆಯಿಂದ, ಪಾರದರ್ಶಕತೆಯಿಂದ ಆರ್ಥಿಕತೆಯ ವ್ಯವಹಾರಗಳನ್ನು ನಿಭಾಯಿಸುವ ನಿಷ್ಠೂರತೆಯುಳ್ಳ ಧೀಮಂತ ಅಧಿಕಾರಿಯಾದ ಡಾ.ಕೆ.ಎಸ್.ಆರ್.ರವರು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಉತ್ತರ ಪತ್ರಿಕೆಗಳ ಗಣಕೀಕೃತ ಮೌಲ್ಯಮಾಪನ ನೀತಿಯನ್ನು ಜಾರಿಗೆ ತಂದವರು.
ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಶಾಶ್ವತ ಸಂಯೋಜನೆ ನೀಡುವ ಪರಿಕಲ್ಪನೆಯಲ್ಲಿ ಕ್ರಿಯಾಶೀಲರಾದವರು. ಎಂ.ಬಿ.ಬಿ.ಎಸ್.ನ ಮೊದಲ ವರ್ಷ ಅನುತ್ತೀರ್ಣರಾದವರು ಬೆಸ ತಂಡವಾಗಿ, ಆರು ತಿಂಗಳ ಅವಧಿ ನಂತರ ಮರುಪರೀಕ್ಷೆ ಬರೆಯುವ ಜಡ ಪದ್ಧತಿಯನ್ನು ರದ್ದುಮಾಡಿ, ತಿಂಗಳೊಪ್ಪತ್ತಿನಲ್ಲಿ ಮರುಪರೀಕ್ಷೆಗೆ ಅವಕಾಶ ನೀಡಿ ಅನುತ್ತೀರ್ಣ ವಿದ್ಯಾರ್ಥಿಗಳನ್ನು ಕೀಳರಿಮೆಯಿಂದ ಮುಕ್ತಗೊಳಿಸಿದ ಶ್ರೀಯುತರು ವಿದ್ಯಾರ್ಥಿಗಳ ಕಣ್ಮಣಿ ಹಾಗೂ ಧ್ರುವತಾರೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಜನರಿಗೆ ಹೃದಯ ಆರೋಗ್ಯ ಸೌಲಭ್ಯ ಒದಗಿಸಲು ಕಲಬುರ್ಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಯಾರಂಭ ಮಾಡಲು ಸಂಪೂರ್ಣ ಸಹಕಾರ ನೀಡಿದ ಡಾ.ಕೆ.ಎಸ್. ರವೀಂದ್ರನಾಥ್‌ರವರು ಗೌರವದ ಪ್ರೀತಿಗೆ ಪಾತ್ರರಾದವರು.
ಆಡಳಿತದ ಆಗು ಹೋಗುಗಳ ಕಾರ್ಯ ಒತ್ತಡದಲ್ಲಿ, ಅಸಹಾಯಕ ಸ್ಥಿತಿಯಲ್ಲಿ ನಿಲ್ಲದೆ ಕುಲಪತಿಗಳಾದ ಡಾ.ಕೆ.ಎಸ್. ರವೀಂದ್ರನಾಥ್‌ರವರು ವೃತ್ತಿ ಮರೆಯದೆ ಮಾನ್ಯ ರಾಜ್ಯಪಾಲರ ಅನುಮತಿ ಪಡೆದು ನಿಗದಿತ ಸಮಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ರೋಗಿಗಳಿಗೆ ಚಿಕಿತ್ಸಾ ಸೇವೆಯಲ್ಲಿ ಕ್ರಿಯಾಶೀಲರಾಗುವ ಶ್ರೀಯುತರ ವೃತ್ತಿಪರ ನಿಷ್ಠತೆ ಜಾಗತಿಕ ಮಟ್ಟದಲ್ಲಿ ಎಲ್ಲಾ ವೈದ್ಯರಿಗೂ ಮಾರ್ಗದರ್ಶಿಯಾದುದು.
ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠಿತ ಘನತೆವೆತ್ತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾನ್ಯ ನಿರ್ದೇಶಕರಾದ ಚಿತ್ರದುರ್ಗ ಜಿಲ್ಲೆಯ ಹೆಮ್ಮೆಯ ಪುತ್ರ ಡಾ.ಕೆ.ಎಸ್. ರವೀಂದ್ರನಾಥ್‌ರವರು ಮಾತೃ ಹೃದಯವಂತರು. ಜಯದೇವ ಹೃದಯಾಲಯ ಜೀವಹಿತ ಪ್ರಿಯರ ಸೇವಾಲಯ ಆಗಿದೆ. ಸನ್ಮಾನ್ಯ ನಿರ್ದೇಶಕರಾದಿಯಾಗಿ ಆಸ್ಪತ್ರೆಯಲ್ಲಿ ಸೇವೆಗೈವ ಪ್ರತಿಯೊಬ್ಬರದು ತಾಯ್ತನದ ಸೇವೆ. ಬೆಂಗಳೂರಂತಹ ವ್ಯವಹಾರದ ಸಮುದ್ರದಲ್ಲಿ ಜಯದೇವ ಹೃದಯಾಲಯ ಒಂದು ಸೇವಾಸಿಂಧು ದ್ವೀಪ ಮತ್ತು ಜೀವ ದಯಾಪಾವನ ಕೇಂದ್ರವಾಗಿದೆ. ಜೀವ ವಿಕಸನ ಹಣತೆ ಎಂತಿರುವ ಮಾರ್ಗದರ್ಶಕರು ಹಾಗೂ ನಿರ್ದೇಶಕರಾದ ಡಾ.ಕೆ.ಎಸ್.ರವೀಂದ್ರನಾಥ್‌ರವರು ಒಬ್ಬ ಶ್ರೇಷ್ಠ ಹೃದ್ರೋಗ ತಜ್ಞರು ಮತ್ತು ಪರಿಪೂರ್ಣ ಮನಸ್ಸಿನ ಚೈತನ್ಯಶಕ್ತಿ ಎಂದೇ ಚಿರಪರಿಚಿತರು. ಲೇಖನ-ಡಾ.ಮೀರಾಸಾಬಿಹಳ್ಳಿ ಶಿವಲಿಂಗಪ್ಪ, ಸಮಾಜ ಚಂತಕರು, ಸಾಹಿತಿಗಳು. ೯೯೭೨೦೭೬೯೨೪.

