ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೆಣ್ಣು ಭ್ರೂಣ ಹತ್ಯೆಯು ಮಗುವಿನ ಬದುಕುವ ಮೂಲಭೂತ ಹಕ್ಕಿನ ನೇರ ಉಲ್ಲಂಘನೆಯಾಗಿದ್ದು, ಇಂತಹ ಅಮಾನವೀಯ ಪದ್ಧತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕ್ರಮ ಹಾಗೂ ತಳಮಟ್ಟದಲ್ಲಿ ಅರಿವು ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆ ನಿಷೇಧ) ಅಧಿನಿಯಮ-1994ರ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರಲ್ಲಿ ಗರ್ಭಧಾರಣೆಯ ಪ್ರಕರಣಗಳು ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪಿಸಿಪಿಎನ್ಡಿಟಿ ಕಾಯ್ದೆಯ ಮಹತ್ವ ಪಡೆದಿದೆ. ಕೇವಲ ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಪರಿಣಾಮಕಾರಿಯಾಗಿ ಕಾನೂನು ಜಾರಿ ಮತ್ತು ಸಾಮಾಜಿಕ ಅರಿವು ಎರಡೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಪಿಸಿಪಿಎನ್ಡಿಟಿ ಸಭೆ ನಡೆಸಿ: ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡದಂತೆ ತಡೆಗಟ್ಟುವುದು ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸುವುದು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಳ (ಲಿಂಗ ಆಯ್ಕೆ ನಿಷೇಧ) ಅಧಿನಿಯಮದ ಉದ್ದೇಶವಾಗಿದ್ದು, ಈ ಕಾಯ್ದೆಯಡಿ ರಚಿಸಲಾದ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿಗಳು ಪ್ರತಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚನೆ ನೀಡಿದರು.
ಪಿಸಿಪಿಎನ್ಡಿಟಿ ಸಮಿತಿಗಳು ಸಮರ್ಪಕವಾಗಿ ಸಭೆ ನಡೆಸದಿರುವುದಕ್ಕೆ ತೀವ್ರ ಅಸಮಾಧಾನವ್ಯಕ್ತಪಡಿಸಿದ ಅವರು, ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಮರ್ಪಕ ಯೋಜನೆಗಳನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೇವಲ ಜಿಲ್ಲಾ ಅಥವಾ ರಾಜ್ಯಮಟ್ಟದ ಚರ್ಚೆಗಳಿಂದ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಮೂಲಕ ತಳಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಬೇಕು. ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿರಂತರ ನಿಗಾ ಇಡಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಕಾನೂನು ಜಾರಿಯ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಸ್ಕ್ಯಾನಿಂಗ್ ಸೆಂಟರ್ಗಳಿಗೆ ಭೇಟಿ:
ಪ್ರಸವಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ತಂಡದೊಂದಿಗೆ ಅನಿರೀಕ್ಷಿತವಾಗಿ ಚಿತ್ರದುರ್ಗ ನಗರದ ವಿವಿಧ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆ, ಆಫಿಯಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಭೇಟಿ ನೀಡಿ, ದಾಖಲೆಗಳ ಪರಿಶೀಲನೆ ನಡೆಸಿ ಅವರು, ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಕುಟಂಬ ಕಲ್ಯಾಣಾಧಿಕಾರಿ ಡಾ.ಟಿ.ಡಿ.ರೇಖಾ, ಪಿಸಿಪಿಎನ್ಡಿಟಿ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಸದಸ್ಯರಾದ ಡಾ.ಸತ್ಯನಾರಾಯಣ, ಕೆ.ಪಿ.ಮೀನಾಕ್ಷಿ, ಪಿಸಿಪಿಎನ್ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಸದಸ್ಯರಾದ ಡಾ.ದೇವರಾಜ್, ಗಾಯತ್ರಿ ಶಿವರಾಂ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಇದ್ದರು.

