ಉನ್ನತ ಶಿಕ್ಷಣ ಜಾಗತಿಕ ಮಟ್ಟದಲ್ಲಿ ಬದಲಾವಣೆ- ಉಪ ಕುಲಪತಿ ಡಾ.ಕುಂಬಾರ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಉನ್ನತ ಶಿಕ್ಷಣ ಜಾಗತಿಕ ಮಟ್ಟದಲ್ಲಿ ಬದಲಾವಣೆಯಾಗುತ್ತಿರುವುದರಿಂದ ತಂತ್ರಜ್ಞಾನದ ಬಗ್ಗೆ ಜ್ಞಾನ ಬೆಳೆಸಿಕೊಂಡರೆ ಗುಣಾತ್ಮಕ ಜೀವನ ನಡೆಸಬಹುದೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಬಿ.ಡಿ.ಕುಂಬಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಪದವಿ ಪ್ರಮಾಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಾ.ಬಿ.ಡಿ.ಕುಂಬಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗಗಳ ಹರಿಕಾರ ದಿ.ದೇವರಾಜ್ ಅರಸ್‌ರವರ ಹೆಸರನ್ನಿಟ್ಟುಕೊಂಡು ಆರಂಭಿಸಿದ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಪದವಿಯ ನಂತರ ಉದ್ಯೋಗಕ್ಕೆ ಉತ್ಸುಕರಾಗಿರುವ ನೀವುಗಳು ತಂತ್ರಜ್ಞಾನ ಬೆಳೆಸಿಕೊಂಡು ಗುಣಾತ್ಮಕ ಬದಲಾವಣೆಯನ್ನು ಶೈಕ್ಷಣಿಕ ರಂಗದಲ್ಲಿ ಅಳವಡಿಸಿಕೊಂಡು ಬೆಳೆಯಬೇಕಿದೆ. ಮಾಹಿತಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿರುವ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಕೊಡುತ್ತಿಲ್ಲದಿರುವುದು ಬೇಸರ ಸಂಗತಿ ಎಂದು ವಿಷಾಧಿಸಿದರು.

ಶಿಕ್ಷಣ ಕೇವಲ ಅಂಕಕ್ಕಷ್ಟೆ ಸೀಮಿತವಾಗಬಾರದು. ಪದವಿಯ ಜೊತೆ ಕೌಶಲ್ಯವಿದ್ದಾಗ ಮಾತ್ರ ದೊಡ್ಡ ಉದ್ಯಮಿಯಾಗಿ ಸ್ವಾವಲಂಭಿ ಬದುಕು ಕಂಡುಕೊಳ್ಳಬಹುದು. ೨೫ ರಿಂದ ೩೦ ಲಕ್ಷ ಮಕ್ಕಳು ಭಾರತದಿಂದ ವಿದೇಶಕ್ಕೆ ಶಿಕ್ಷಣಕ್ಕಾಗಿ ಹೋಗುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ನಮ್ಮ ಮಕ್ಕಳು ಹೋಗಿ ಬರುವ ಅವಕಾಶವನ್ನು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಕಲ್ಪಿಸಲಾಗುವುದು. ಕೌಶಲ್ಯವಿಲ್ಲದ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಾರೆ. ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿಯೇ ಕಾಯುವ ಬದಲು ಯಶಸ್ವಿ ಉದ್ಯಮಿಯಾಗುವಂತ ತರಬೇತಿ ಪಡೆಯಬೇಕು. ಶಿಕ್ಷಣ ಸಾಕಷ್ಟು ಬೆಳೆಯುತ್ತಿರುವುದರಿಂದ ಕನಿಷ್ಠ ಸ್ನಾತಕೋತ್ತರ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಲೇಬೇಕೆಂದು ತಿಳಿಸಿದರು.

ಪದವಿ ಪ್ರಮಾಣ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಹಾಗೂ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ಉದ್ಯೋಗಕ್ಕಾಗಿಯೇ ಪದವಿ ಪಡೆಯುವಂತಾಗಬಾರದು. ಪ್ರತಿಯೊಬ್ಬರಲ್ಲಿಯೂ ಸಾಧನೆಯ ಛಲವಿದ್ದಾಗ ಮಾತ್ರ ಜೀವನದಲ್ಲಿ ಸ್ವ-ಉದ್ಯೋಗಿಗಳಾಗಬಹುದು. ಒಂದು ಕಾಲದಲ್ಲಿ ಅತ್ಯಂತ ಕಡು ಬಡತನದಲ್ಲಿದ್ದ ಇನ್‌ಫೋಸಿಸ್‌ನ ನಾರಾಯಣಮೂರ್ತಿ ಈಗ ಲಕ್ಷಾಂತರ ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಪದವಿ ಸರ್ಟಿಫಿಕೇಟ್ ಕೇವಲ ಅಂಕಗಳಿಗಷ್ಟೆ ಸೀಮಿತವಾಗಬಾರದು. ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬೇಕೆಂದು ಹೇಳಿದರು.

ಪದವಿ ಪಡೆದ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟ. ಸ್ವಾವಲಂಭಿಗಳಾಗಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಿ. ನಮ್ಮ ಸಂಸ್ಥೆಯಲ್ಲಿ ನರ್ಸಿಂಗ್ ವ್ಯಾಸಂಗ ಮಾಡಿ ಹೊರ ಹೋದವರು ಈಗ ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆಯಾಗಿದೆ. ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಗುರು-ಹಿರಿಯರು, ಪೋಷಕರು ಹಾಗೂ ಸಮಾಜಕ್ಕೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಿ ಎಂದು ಪದವಿ ಪ್ರಮಾಣ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಲಾಭದ ದೃಷ್ಟಿಯಿಂದ ಸಂಸ್ಥೆಯನ್ನು ಕಟ್ಟಿಲ್ಲ. ಮೂವತ್ತು ವರ್ಷಗಳಿಂದ ಶಾಸಕನಾಗಿ ರಾಜಕೀಯ ಮಾಡುತ್ತಿದ್ದೇನೆ. ಎಲ್ಲಿಯೂ ಕಪ್ಪುಚುಕ್ಕೆಯಿಲ್ಲದೆ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತಿದ್ದೇನೆಂದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ ನಲವತ್ತು ವರ್ಷಗಳ ಹಿಂದೆ ಆರಂಭಗೊಂಡ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನಾಲ್ಕು ಪದವಿ ಕಾಲೇಜುಗಳಿಂದ ೪೧೫ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪ್ರಮಾಣ ಸ್ವೀಕರಿಸುತ್ತಿರುವುದು ಎಲ್ಲಿಲ್ಲದ ಖುಷಿ ಕೊಟ್ಟಿದೆ. ಸಾವಿರಾರು ಕುಟುಂಬಗಳಿಗೆ ಸಂಸ್ಥೆ ಅನ್ನ ನೀಡುತ್ತಿರುವಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಅದಕ್ಕೆ ಸಂಸ್ಥಾಪಕರಾದ ಡಾ.ಎಂ.ಚಂದ್ರಪ್ಪನವರ ಪರಿಶ್ರಮವಿದೆ ಎಂದರು.

ನಮ್ಮ ಸಂಸ್ಥೆಯಲ್ಲಿ ಓದಿದವರಲ್ಲಿ ೩೭೦೦ ವಿದ್ಯಾರ್ಥಿಗಳು ಶಿಕ್ಷಕರುಗಳಾಗಿದ್ದಾರೆ. ಇದುವರೆವಿಗೂ ಐದು ಸಾವಿರ ವಿದ್ಯಾರ್ಥಿಗಳು ಪದವಿ ತೆಗೆದುಕೊಂಡಿದ್ದಾರೆ. ಇಲ್ಲಿ ಓದಿದವರಲ್ಲಿ ಕೆಲವರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ಗಳಾಗಿದ್ದಾರೆ. ಲಾಭದ ಆಸೆಗೆ ಸಂಸ್ಥೆ ಕಟ್ಟಿಲ್ಲ. ಎರಡು ಸಾವಿರಕ್ಕೂ ಹೆಚ್ಚು ನರ್ಸ್‌ಗಳನ್ನು ಸಮಾಜಕ್ಕೆ ಕೊಟ್ಟಿದ್ದೇವೆ. ೨೦೧೭-೧೮ ರಲ್ಲಿ ಆದ್ಯ ಕಾಲೇಜ್ ಆಫ್ ಫಾರ್ಮಸಿ ತೆರೆಯಲಾಗಿದೆ. ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಚಿಂತನೆಯಿದೆ ಎಂದು ತಿಳಿಸಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ, ಅಧ್ಯಕ್ಷೆ ಯಶಸ್ವಿನಿ ಕಿರಣ್, ವೆಂಕಟೇಶ್ವರ ಬಿ.ಇ.ಡಿ.ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಸಿ.ಅನಂತರಾಮು, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಜೆ.ಶಿವಕುಮಾರ್, ಎಸ್.ಎಲ್.ವಿ.ಸ್ಕೂಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್ ಎಂ.ಎಂ.ಮಹಾಂತೇಶ್, ಆದ್ಯಾ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ್ಯರಾದ ಡಾ.ಪಾಲಾಕ್ಷ ಎಂ.ಎನ್.ವೇದಿಕೆಯಲ್ಲಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";