ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಭೂ ಕಬಳಿಕೆ ಮಾಡಿದ್ದಾರೆಂಬ ಆರೋಪ ನಿನ್ನೆಯಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ವಾಸ್ತವವಾಗಿ 1996 ರಲ್ಲಿ ನಮ್ಮ ತಂದೆ ನಂಜಪ್ಪ ಉರುಫ್ ಚಾಮರಾಜೇಗೌಡ ಅವರು ಕೇತಗಾನಹಳ್ಳಿಯಲ್ಲಿ 03 ಎಕರೆ 25 ಗುಂಟೆ ಜಮೀನನ್ನು ಕ್ರಮಬದ್ಧವಾಗಿ ಖರೀದಿಸಿರುತ್ತಾರೆ ಎಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ತಂದೆಯವರು ಕಾಲವಾದ ನಂತರ ಅದು ನನ್ನ ಹೆಸರಿಗೆ ವರ್ಗಾವಣೆಯಾಗಿರುತ್ತದೆ, ಎಲ್ಲವೂ ಕ್ರಮಬದ್ಧವಾಗಿ ಕಾನೂನಾತ್ಮಕವಾಗಿ ನಡೆದಿದ್ದು ಯಾವುದೇ ರೀತಿಯ ಒತ್ತುವರಿ ನಡೆದಿಲ್ಲ ಎಂದು ಮಂಜುನಾಥ್ ತಿಳಿಸಿದ್ದಾರೆ.
ಈ ಬಗ್ಗೆ ನಾನು ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ನಲ್ಲೂ ತಿಳಿಸಿರುತ್ತೇನೆ. ಇತ್ತೀಚಿಗೆ ಕೆಲವು ಮಾಧ್ಯಮಗಳಲ್ಲಿ ವಾಸ್ತವಾಂಶವನ್ನು ತಿರುಚಿ ಜನತೆಗೆ ತಪ್ಪು ಸಂದೇಶ ನೀಡುತ್ತಿರುವುದು ಹಾಗೂ ನನ್ನ ಹೆಸರಿಗೆ ಚ್ಯುತಿ ಬರುವ ರೀತಿ ಆರೋಪಗಳನ್ನು ಮಾಡುತ್ತಿರುವುದು ನನಗೆ ನೋವುಂಟು ಮಾಡಿದೆ ಎಂದು ಡಾ.ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಅನೇಕ ದಶಕಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ, ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡಿಲ್ಲ. ನನ್ನ ಮೇಲೆ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.