ಬೆಂಗಳೂರನ್ನು ಬಹಳ ಮೆಚ್ಚಿಕೊಂಡಿದ್ದ ಡಾ.ಮನಮೋಹನ್ ಸಿಂಗ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿಗೂ ಮಾಜಿ ಪ್ರಧಾನಿ ಮನಮೋಹನ್​​​ ಸಿಂಗ್ ಅವರಿಗೂ ತುಂಬಾ ಒಟನಾಟವಿಟ್ಟು.​ ಬೆಂಗಳೂರನ್ನು ಮನಮೋಹನ್​​​ ಸಿಂಗ್ ಬಹಳ ಮೆಚ್ಚಿಕೊಂಡಿದ್ದರು. ಬೆಂಗಳೂರಿಗೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದ್ದಾರೆ.

ಮಾಜಿ ಪ್ರಧಾನಿಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ಕರ್ನಾಟಕದಲ್ಲಿ 2008ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆಗ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್​ ಪ್ರಧಾನ ಮಂತ್ರಿಯಾಗಿದ್ದರು. 2008ರ ಮೇ ತಿಂಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಿಂಗ್ ಉದ್ಘಾಟಿಸಿದ್ದರು ಎಂದು ಶಿವಕುಮಾರ್ ಸ್ಮರಿಸಿದ್ದಾರೆ.

ನಗರದ ಮೊದಲ ಮೆಟ್ರೋ ರೈಲಿಗೆ ಚಾಲನೆ ನೀಡಿದ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. 2011ರಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ಬೆಂಗಳೂರಿನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಮಾಡಿದ ಮನಮೋಹನ್ ಸಿಂಗ್, ರಾಷ್ಟ್ರದ ಪ್ರತಿಯೊಂದು ನಗರವು ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೆಜ್ಜೆಯಿಡುತ್ತಿದೆ. ಈ ನಗರದ ಹಿಂದಿನ ಯಶಸ್ಸನ್ನು ಗಮನದಲ್ಲಿಟ್ಟುಕೊಂಡೇ ದೃಢ, ಸಕಾರಾತ್ಮಕ ಹೆಜ್ಜೆಗಳನ್ನಿಡುತ್ತಿವೆ ಎಂದರು.

ಬೆಂಗಳೂರಿನಲ್ಲಿರುವ ಡಾ.ಬಿ.ಆರ್​​.ಅಂಬೇಡ್ಕರ್​ ಸ್ಕೂಲ್​ ಆಫ್​​ ಎಕನಾಮಿಕ್ಸ್​​ ವಿಶ್ವವಿದ್ಯಾಲಯದ ಅಕಾಡೆಮಿಕ್​ ಸೆಷನ್​ಗಳನ್ನು 2017ರಲ್ಲಿ ಉದ್ಘಾಟಿಸಿದರು. ಪಿ.ವಿ.ನರಸಿಂಹರಾವ್​​​ ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು, ನರಸಿಂಹರಾವ್ ಅವರಿಗೆ ಆರ್ಥಿಕ ಸಲಹೆಗಾರರಾಗಿದ್ದರು. 1991ರಲ್ಲಿ ಬೆಂಗಳೂರಿನ ಇಂಡಿಯನ್​​​ ಇನ್ಸ್​​​ಟ್ಯೂಟ್​​​ ಆಫ್​ ಮ್ಯಾನೇಜ್​ಮೆಂಟ್​​ನ 16ನೇ ಘಟಿಕೋತ್ಸವದಲ್ಲಿ ಮನಮೋಹನ್​ ಸಿಂಗ್​ ಅವರು ಭಾರತದ ಕುರಿತ ತಮ್ಮ ಆರ್ಥಿಕ ದೃಷ್ಟಿಕೋನದ ಬಗ್ಗೆ ಭಾಷಣ ಮಾಡಿದ್ದರು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.

ನರ್ಮ್ ಯೋಜನೆ ಮೂಲಕ ಅನೇಕ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಮನಮೋಹನ್ ಸಿಂಗ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಹಲವು ಫ್ಲೈಓವರ್‌ಗಳು ಸಹ ಸಿಂಗ್​ ಅವರು ನೀಡಿದ ಕೊಡುಗೆಗಳಾಗಿವೆ. ದೇಶದ ಎಲ್ಲಾ ವರ್ಗದ ಜನರಿಗೆ ಮರೆಯಲಾಗದ ಕೊಡುಗೆ ಕೊಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡಿ ಅವರ ಪರವಾಗಿ ದೃಢವಾಗಿ ನಿಂತಿದ್ದು ಇದೇ ಮನಮೋಹನ್ ಸಿಂಗ್ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";