ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರನ್ನು ಯಾವುದೇ ಖಾಲಿ ಹುದ್ದೆಗಳ ಎದುರಾಗಿ ನೇಮಕಾತಿ ಮಾಡಲಾಗುವುದಿಲ್ಲ. ಬದಲಾಗಿ, ಕಾಲೇಜುಗಳಲ್ಲಿ ಲಭ್ಯವಾಗುವ ಕಾರ್ಯಭಾರವನ್ನು ಮೊದಲು ಖಾಯಂ ಉಪನ್ಯಾಸಕರಿಗೆ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಕಾರ್ಯಭಾರಕ್ಕೆ ಮಾತ್ರ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿ ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉನ್ಯಾಸಕರಿಗೆ ಸೇವಾ ಭದ್ರತೆ ನೀಡಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ ಅವರು ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ತಿನಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ, ಕಳೆದ 15-20 ವರ್ಷಗಳಿಂದ ನಾನ್ ಯುಜಿಸಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸುಮಾರು 6000ಕ್ಕೂ ಹೆಚ್ಚು, ಅತಿಥಿ, ಉವನ್ಯಾಸಕರು ಹಾಗು ಅವರ ಕುಟುಂಬದವರು ಬೀದಿ ಪಾಲಾಗುವುದನ್ನು ತಪ್ಪಿಸಲು, ಈ ಹಿಂದೆ ಇದ್ದಂತೆ ಮೆರಿಟ್ ಪಟ್ಟಿಯನ್ನು ತಯಾರಿಸಿ, ಅಂತಹ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಲು ಅನುವಾಗುವಂತೆ
ಒಂದು ವಿಶೇಷ ಕಾನೂನನ್ನು ರೂಪಿಸುವ ಕುರಿತು ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಚುನಾವಣಾ ಕ್ಷೇತ್ರದ ಸದಸ್ಯರಾದ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅವರು ನಿಯಮ 72ರ ಮೇರೆಗೆ ನೀಡಿರುವ ಸೂಚನೆಗೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ಸರ್ಕಾರದ ಆದೇಶ ಸಂಖ್ಯೆ: ಇಡಿ 242 ಡಿಸಿಇ 2021, ದಿನಾಂಕ 14.01.2022 ಮತ್ತು ತಿದ್ದುಪಡಿ ಆದೇಶ ದಿನಾಂಕ 24.01.2022ರಲ್ಲಿ ಅತಿಥಿ ಉಪನ್ಯಾಸಕರಿಗೆ ಈ ಹಿಂದೆ ನೀಡಲಾಗುತ್ತಿದ್ದ ಕಲಾ/ವಾಣಿಜ್ಯ ವಿಷಯಗಳಿಗೆ ಗರಿಷ್ಠ 8 ಗಂಟೆ ಹಾಗೂ ವಿಜ್ಞಾನ ವಿಷಯಗಳು/ಪ್ರಾಯೋಗಿಕ ತರಗತಿಗಳಿಗೆ ಗರಿಷ್ಠ 10 ಗಂಟೆಗಳ ಬದಲಾಗಿ, ಕಲಾ/ವಾಣಿಜ್ಯ ವಿಷಯಗಳಿಗೆ ಗರಿಷ್ಠ 15 ಗಂಟೆ ಹಾಗೂ ವಿಜ್ಞಾನ ವಿಷಯಗಳು/ಪ್ರಾಯೋಗಿಕ ತರಗತಿಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ನೀಡಿ, ಗೌರವಧನವನ್ನು ಹೆಚ್ಚಿಸಲಾಗಿದೆ.
ಈ ಆದೇಶದಲ್ಲಿ ಯು.ಜಿ.ಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗಧಿತ ವಿದ್ಯಾರ್ಹತೆಯನ್ನು ಹೊಂದಲು 3 ವರ್ಷಗಳ ಕಾಲಾವಧಿ ನೀಡುವುದು, 3 ವರ್ಷಗಳ ನಂತರ ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಎಂಬುದಾಗಿ ಅದೇಶಿಸಲಾಗಿರುತ್ತದೆ.
ಅದರನ್ವಯ ಯು.ಜಿ.ಸಿ ಅರ್ಹತೆ ಪಡೆಯದ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ. ವಿದ್ಯಾರ್ಹತೆಯನ್ನು ಪಡೆಯಲು ದಿನಾಂಕ:14.01.2022 ರಿಂದ ದಿನಾಂಕ:13.01.2025ರವರೆಗೆ 03 ವರ್ಷಗಳ ಕಾಲಾವಕಾಶವನ್ನು ನೀಡಲಾಗಿತ್ತು.
ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಸಂಖ್ಯೆ: 23600/2023ಕ್ಕೆ ಮಾನ್ಯ ನ್ಯಾಯಾಲಯವು ದಿನಾಂಕ:05.09.2024ರಂದು ತೀರ್ಪು ನೀಡಿ, ಅತಿಥಿ ಉಪನ್ಯಾಸಕರ ಆಯ್ಕೆಗೆ ಯು.ಜಿ.ಸಿ. ವಿದ್ಯಾರ್ಹತೆ (ಎನ್‌ಇಟಿ/ಎಸ್‌ಎಲ್‌ಇಟಿ/ಪಿಹೆಚ್.ಡಿ) ಮಾನದಂಡವನ್ನು ಅನುಸರಿಸುವಂತೆ ಆದೇಶಿಸಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ:05.09.2024ರ ತೀರ್ಪಿನ ಸಂಬಂಧ ಇಲಾಖಾ ವತಿಯಿಂದ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅಪೀಲು ಸಂಖ್ಯೆ 1578/2024ನ್ನು ದಾಖಲಿಸಲಾಗಿತ್ತು. ಸದರಿ ರಿಟ್ ಅಪೀಲು ಸಂಖ್ಯೆ 1578/2024ನ್ನು ಮಾನ್ಯ ವಿಭಾಗೀಯ ಪೀಠವು (ಚೀಪ್ ಜಸ್ಟೀಸ್ ಬೆಂಚ್) : ದಿನಾಂಕ 08.10.2025ರಂದು ವಿಚಾರಣೆಗೆ ತೆಗೆದುಕೊಂಡಿದ್ದು, ಈ ದಿನಾಂಕದಂದು ರಾಜ್ಯದ ರಿಟ್ ಅಪೀಲನ್ನು ವಜಾಗೊಳಿಸಿ, ನೀಡಿರುವ ಅಂತಿಮ ತೀರ್ಪಿನಲ್ಲಿ ರಿಟ್ ಅರ್ಜಿ ಸಂಖ್ಯೆ:23600/2023ರಲ್ಲಿ ದಿನಾಂಕ:05.09.2024ರಂದು ನೀಡಿರುವ ತೀರ್ಪನ್ನು ಎತ್ತಿ ಹಿಡಿದು, 2025-26ನೇ ಸಾಲಿನಿಂದ ಯು.ಜಿ.ಸಿ ನಿಯಮಗಳನ್ವಯ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿರುತ್ತದೆ.
ರಿಟ್ ಅಪೀಲು ಸಂಖ್ಯೆ:1578/2024ರಲ್ಲಿ ದಿನಾಂಕ:08.10.2025ರಂದು ನೀಡಿರುವ ತೀರ್ಪಿನ ಕುರಿತು ಕಾನೂನು ಅಭಿಪ್ರಾಯ ಪಡೆಯಲಾಗಿದ್ದು, ನೀಡಿರುವ ಅಭಿಪ್ರಾಯದನ್ವಯ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಯನ್ನು ದಾಖಲಿಸಲು ಸರ್ಕಾರವು ಆದೇಶ ಸಂಖ್ಯೆ ಇಡಿ 425 ಡಿಸಿಇ 2025, ದಿನಾಂಕ:29.11.2025ರಲ್ಲಿ ಕಾರ್ಯಕಾರಿ ಆದೇಶವನ್ನು ಹೊರಡಿಸಿದೆ ಎಂದು ತಿಳಿಸಿದರು.

