ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿಯೊಬ್ಬ ವ್ಯಕ್ತಿಯೂ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಒತ್ತುನೀಡಬೇಕಾಗುತ್ತದೆ. ನಮ್ಮೆಲ್ಲರಿಗೂ ಪ್ರಪಂಚದಲ್ಲಿ ನಡೆಯುವ ವಿದ್ಯಾಮಾನಗಳನ್ನು ಕಣ್ಮುಂಬಿಕೊಳ್ಳಲು ನಮ್ಮ ಕಣ್ಣುಗಳನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕಿದೆ. ಕಣ್ಣುದೇಹದ ಅತಿಮುಖ್ಯಅಂಗವಾಗಿದೆ. ದೃಷ್ಠಿಯಿಂದಲೇ ಸೃಷ್ಠಿ ಎಂಬುವುದನ್ನು ನಾವೆಲ್ಲರೂ ಅರಿಯಬೇಕೆಂದು ಜಿಲ್ಲಾ ಅಂದತ್ವ ನಿವಾರಣಧಿಕಾರಿ ಡಾ.ನಾಗರಾಜು ತಿಳಿಸಿದರು.
ಅವರು, ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂದತ್ವನಿಯಂತ್ರಣ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯನಾಗರೀಕರಿಗೆ ಉಚಿತ ನೇತ್ರದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಹಿರಿಯನಾಗರೀಕರಿಗಾಗಿ ಉಚಿತ ನೇತ್ರತಪಾಸಣಾ ಶಿಬಿರವನ್ನು ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಆಯೋಜಿಸಿದ್ದು, ಹಿರಿಯ ನಾಗರೀಕರು ಇದರ ಪ್ರಯೋಜನವನ್ನು ಪಡೆಯುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಂಗವಿಲಕ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಸರ್ಕಾರ ಹಿರಿಯ ನಾಗರೀಕರ ಉಚಿತ ನೇತ್ರತಪಾಸಣಾ ಶಿಬಿರದ ಮೂಲಕ ಅವರ ಕಣ್ಣುಗಳಿಗೆ ಆಗುವ ತೊಂದರೆಯನ್ನು ನಿಯಂತ್ರಿಸಲು ಈ ಯೋಜನೆ ರೂಪಿಸಿದೆ. ೨೦೨೪-೨೫ನೇ ಸಾಲಿನ ಸರ್ಕಾರದ ನಿಯಮಗಳ ಪ್ರಕಾರ ಆರು ತಾಲ್ಲೂಕು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.
ವಿಕಲಚೇತನ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ. ಸರ್ಕಾರ ಈ ಯೋಜನೆಯ ಅನುಷ್ಠಾನದಿಂದ ಹಿರಿಯ ನಾಗರೀಕರ ಆರೋಗ್ಯವನ್ನು ಸಂರಕ್ಷಿಸುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಹಿರಿಯ ನಾಗರೀಕರು ಇಂತಹ ಉಚಿತ ನೇತ್ರದಾನ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಕಣ್ಣಿನ ದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಜ.೩ರಿಂದ೧೦ರ ತನಕ ಈ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಎರಡು ಕಣ್ಣಿನ ಪೊರೆಗಳ ಚಿಕಿತ್ಸೆಗೆ ಸರ್ಕಾರ ನೆರವು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ನೇತ್ರತಜ್ಞರಾದ ಡಾ.ಶಿಲ್ಪ, ಪಾಂಚಜನ್ಯ, ಆಶಾ, ನವೀನ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.