ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಕ್ಕಟ ಉದ್ಯಮ ಆರಂಭಿಸಲು ಮತ್ತು ಕೋಳಿ ಮಾಂಸ ಮತ್ತು ಮೊಟ್ಟೆ ಸಂಸ್ಕರಣೆ ಕುರಿತು ಖ್ಯಾತ ಪಶುವೈದ್ಯರಾದ ಡಾ.ನರಹರಿ ಅವರು ರೈತರಿಗಾಗಿ ಮುಂದುವರೆದ ಉತ್ತಮ ಲೇಖನ…
ಕುಕ್ಕುಟ ಉದ್ಯಮದ ದೇಶದ ಪ್ರೋಟೀನ್ ಭದ್ರತೆಯಲ್ಲಿ ಪಾತ್ರ ಮತ್ತು ರಾಷ್ಟ್ರೀಯ ಆರ್ಥಿಕತೆಗೆ (ಜಿಡಿಪಿ) ಅದರ ಕೊಡುಗೆ:
ಭಾರತದಲ್ಲಿ ಪ್ರೋಟೀನ್ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ಕೋಳಿ ಉದ್ಯಮ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ಜನರಿಗೆ ಸುಲಭವಾಗಿ ಮತ್ತು ಕೈಗೆಟಕುವ ಬೆಲೆಯಲ್ಲಿ ಪ್ರೋಟೀನ್ ಸಿಗುತ್ತದೆ. ಇದರ ಜೊತೆ ಕುಕ್ಕುಟ ಮಾಂಸದ ಆಹಾರವು ಪ್ರೋಟೀನ್ ಪರಿವರ್ತನೆ (protein conversion ratio) ಮಾಡುವಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ.
ಈ ಸಾಮರ್ಥ್ಯವು ಕುಕ್ಕುಟ ಬೆಳೆಸಲು ಬೇಕಾಗುವ ಆಹಾರ ಉತ್ಪಾದನೆ ಅಗತ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಕುಕ್ಕುಟ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುತ್ತದೆ.
ಈ ರೀತಿ ಕುಕ್ಕುಟ ಉದ್ಯಮಕ್ಕೆ ಅಗತ್ಯವಿರುವ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಕೋಳಿ ಮಾಂಸದ ಪ್ರೋಟೀನ್ ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದ, ಆಹಾರದಿಂದ ಬಣದ ಪೌಷ್ಟಿಕಾಂಶ ದೇಹದಿಂದ ವೇಗವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ ಮತ್ತು ಅವುಗಳ ಬಳಕೆಯನ್ನು ಸುಗಮಗೊಳಿಸುತ್ತದೆ.
ಈ ಗುಣ ಲಕ್ಷಣಗಳ ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಉತ್ಸಾಹಿಗಳನ್ನು ಆಕರ್ಷಿಸುತ್ತಿವೆ. ಹೆಚ್ಚುವರಿಯಾಗಿ, ಕುಕ್ಕುಟ ಉತ್ಪಾದನೆಗಳು ವಿಭಿನ್ನ ಚಟುವಟಿಕೆಗೆ ಬೇಕಾಗುವ ಪ್ರೋಟೀನ್ ಬೇಡಿಕೆಗಳನ್ನು ಪೂರೈಸುವಲ್ಲಿ ಸಾಮರ್ಥ್ಯ ತೋರುತ್ತವೆ. ಸಂಘಟಿತ ಕುಕ್ಕುಟ ಮಾಂಸದ ಸಂಸ್ಕರಣೆಯು ಭಾರತದಲ್ಲಿ ಮುಂದಿನ ತಲೆಮಾರುಗಳಿಗೆ ಅವಶ್ಯವಿರುವ ಪ್ರೋಟೀನ್ಗಳನ್ನು ಒದಗಿಸಲು ಹಲವು ಮಾರ್ಗಗಳನ್ನು ತೋರಿಸುತ್ತದೆ.
ಈ ರೀತಿಯಲ್ಲಿ ಭಾರತದಲ್ಲಿ ಕುಕ್ಕುಟ ಮಾಂಸ ಉತ್ಪಾದನೆಯು ದೇಶದ ಆರ್ಥಿಕ ಬೆಳವಣಿಗೆ ಮತ್ತು ಕೃಷಿ ಪ್ರಗತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಕೋಳಿ ಸಾಕಣೆ ವಲಯವು ರಾಷ್ಟ್ರೀಯ ಜಿಡಿಪಿಯ 1% ಮತ್ತು ಒಟ್ಟಾರೆ ಜಾನುವಾರುಗಳಲ್ಲಿ ಜಿಡಿಪಿಯ 14% ರಷ್ಟಿದೆ. ಅಂಕಿಗಳ ಪ್ರಕಾರ 2021ನೇ ಆರ್ಥಿಕ ವರ್ಷದಲ್ಲಿ, ಭಾರತದಲ್ಲಿ ಪಶುಸಂಗೋಪನೆ ಕ್ಷೇತ್ರದಲ್ಲಿ ಕುಕ್ಕುಟ ಮಾಂಸದಿಂದ ಒಟ್ಟು 1.44 ಲಕ್ಷ ಕೋಟಿ ವಹಿವಾಟು ನಡೆದಿದೆ (Ministry of Fisheries 2023).
ಇದು ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದೆ. ಭಾರತದಲ್ಲಿ ಕೋಳಿ ಸಾಕಣೆ ಮಾರುಕಟ್ಟೆಯು ಪ್ರಸ್ತುತ $28.18 ಬಿಲಿಯನ್ ಮೌಲ್ಯದ್ದಾಗಿದೆ ಮತ್ತು 2032 ರ ವೇಳೆಗೆ ಇದು $44.97 ಬಿಲಿಯನ್ ತಲುಪುವ ನಿರೀಕ್ಷೆಯಿದೆ (Thaper 2024). ಆದ್ದರಿಂದ, ಭಾರತದಲ್ಲಿ ಕೋಳಿ ಉತ್ಪಾದನೆ ಮತ್ತು ಸಂಸ್ಕರಣಾ ಉದ್ಯಮವು ಆರ್ಥಿಕ ಬೆಳವಣಿಗೆ ಹಾಗು ಉದ್ಯೋಗಾವಕಾಶಗಳ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ. ಕುಕ್ಕುಟ ಉದ್ಯಮವು ಭಾರತದ ಕೃಷಿ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವದರಿಂದ ಅದರ ಸ್ಥಿರತೆ, ನವೀನತೆ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯಗಳು ದೇಶದ ಆರ್ಥಿಕ ಅಭಿವೃದ್ಧಿಯನ್ನು ಮುಂದೆ ಸಾಗಲು ನಿರ್ಣಾಯಕ ಪಾತ್ರವಹಿಸುತ್ತದೆ.
ಕುಕ್ಕುಟ ವ್ಯವಹಾರದ ಸುಸ್ಥಿರತೆ ಮತ್ತು ರಫ್ತು ನಿರೀಕ್ಷೆಗಳಲ್ಲಿ ಕುಕ್ಕುಟ ಸಂಸ್ಕರಣಾ ಘಟಕಗಳ ಪಾತ್ರ:
ಭಾರತೀಯ ಕುಕ್ಕುಟ ಉತ್ಪನ್ನಗಳ ರಫ್ತು ಪ್ರಮಾಣವು 2010-11ರಲ್ಲಿ 1,66,811 ಮೆಟ್ರಿಕ್ ಟನ್, 2018-19 ರಲ್ಲಿ 5,16,712 ಮೆಟ್ರಿಕ್ ಟನ್ ಇದೆ. ಈ ಪ್ರಮಾಣಗಳು ಕುಕ್ಕುಟ ಉದ್ಯಮದ ಸ್ಥಿರವಾದ ಜಾಗತಿಕ ಬೇಡಿಕೆ ಹಾಗು ಅದರ ತಕ್ಕ ರಫ್ತು ಪ್ರಮಾಣದ ಏರಿಕೆಯನ್ನು ಪ್ರತಿಬಿಂಬಿಸುತ್ತವೆ (APEDA 2019). ಈ ಏರಿಕೆ ಉದ್ಯೋಗ ಸೃಷ್ಟಿ, ಆಹಾರ ಭದ್ರತೆ, ಕೃಷಿ ವೃದ್ಧಿ, ರಫ್ತು ಅವಕಾಶಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಬೆಲೆ ಸ್ಥಿರತೆಗೆ ಅತ್ಯಂತ ಸಹಾಯಕವಾಗಿದೆ.

ಈ ರೀತಿಯಾಗಿ ಕುಕ್ಕುಟ ಉದ್ಯಮವು ಬಹುಮುಖಿ ಪರಿಣಾಮವನ್ನು ದೇಶದ ಆರ್ಥಿಕತೆ ಮೇಲೆ ಸಾರುತ್ತದೆ. ಇದಲ್ಲದೆ, ಕುಕ್ಕುಟ ಸಂಸ್ಕರಣಾ ಘಟಕಗಳು ಸಂಪನ್ಮೂಲ ಬಳಕೆಯನ್ನು ಗರಿಷ್ಠಗೊಳಿಸುವ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ಸುಸ್ಥಿರತೆಗೆ ಕೊಡುಗೆ ನೀಡುತ್ತವೆ. ಸಂಸ್ಕರಣಾ ಘಟಕಗಳು ಉಪ-ಉತ್ಪನ್ನಗಳು ಹಾಗು ತ್ಯಾಜ್ಯ ವಸ್ತುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯಮಾಡುತ್ತವೆ. ಉದಾಹರಣೆಗೆ ಸಂಸ್ಕರಣಾ ಘಟಕಗಳು ರೆಕ್ಕೆಗಳು, ತಲೆ, ರಕ್ತ, ಕಾಲುಗಳು, ಹೊಟ್ಟೆಯ ಭಾಗಗಳು, ಮತ್ತು ವಿವಿಧ ಗ್ರಂಥಿಗಳನ್ನು ಉತ್ಪನ್ನ ಮಾಡುತ್ತವೆ.
ಈ ರೀತಿಯ ಉಪ-ಉತ್ಪನ್ನಗಳು ವೃತ್ತಾಕಾರದ ಆರ್ಥಿಕ ಮಾದರಿಗೆ (circular economy) ಸಹಾಯವಾಗುತ್ತದೆ. ಇದರಿಂದ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಬಹುದು. ಉದಾಹರಣೆಗೆ ಆಮ್ಲಜನಕ ರಹಿತ ಜೀರ್ಣಕ್ರಿಯೆಯ ಮೂಲಕ ಉಪ ಉತ್ಪನ್ನಗಳನ್ನು ಪಶು ಆಹಾರ, ರಸಗೊಬ್ಬರಗಳು ಅಥವಾ ಜೈವಿಕ ಶಕ್ತಿಯಂತಹ ಹೆಚ್ಚಿನ ಮೌಲ್ಯದ ಉತ್ಪನ್ನಗಳಾಗಿ ಪರಿವರ್ತಿಸಬಹುದು. ಈ ಪ್ರಕ್ರಿಯೆಯು ಕಸದ ಉತ್ಪಾದನೆಯನ್ನು ಕಡಿಮೆ ಮಾಡುವ ಜೊತೆಗೆ ಪರಿಸರದ ಹಾನಿಯನ್ನು ಕಡಿಮೆ ಮಾಡಲು ಹಾಗು ಹೆಚ್ಚಿನ ಆದಾಯ ಬರಲು ಬಹಳ ಸಹಕಾರಿಯಾಗಿರುತ್ತದೆ.
ಉದಾಹರಣೆ: ಕುಕ್ಕುಟ ಸಂಸ್ಕರಣಾ ತ್ಯಾಜ್ಯವನ್ನು ಆಮ್ಲಜನಕರಹಿತ ಜೀರ್ಣಕ್ರಿಯೆ ಮೂಲಕ ಅನಿಲವಾಗಿ ಪರಿವರ್ತಿಸಿದರೆ, 4.15 ಮೆಗಾಜೌಲ್ಸ್/ನ್ಯೂಟ್ರಲ್ ಕ್ಯೂಬಿಕ್ ಮೀಟರ್ (MJ/Nm³)ವರೆಗೆ ಶಾಖವನ್ನು ಉತ್ಪನ್ನ ಮಾಡಬಹುದು. ಈ ಶಕ್ತಿಯು ಕೋಳಿ ಗೂಡುಗಳ ವಿದ್ಯುತ್ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ. ಇನ್ನೊಂದೆಡೆ, ಬಯೋಚಾರ್ ಉಪ-ಉತ್ಪನ್ನಗಳು ಟನ್ ಗೆ 20000 ರೂಪಾಯಿಗಳಷ್ಟು ಆದಾಯವನ್ನು ತಂದುಕೊಡುತ್ತವೆ. ಇದರ ಜೊತೆಗೆ 3000 ರೂಪಾಯಿಗಳಷ್ಟು ವಿಲೇವಾರಿ ವೆಚ್ಚವನ್ನು ತಪ್ಪಿಸುತ್ತವೆ (de Priall, Brandoni et al. 2022).
ಈ ಉಪಉತ್ಪನ್ನಗಳ ಜೊತೆಗೆ ಸಂಸ್ಕರಣೆ ಘಟಕಗಳು ಪರಿಸರ ಸ್ನೇಹಿ, ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುವಿಕೆ, ಮತ್ತು ವಿನೂತನ ಉತ್ಪನ್ನಗಳ ಆವಿಷ್ಕರಣೆಗೆ ಉತ್ತೇಜನ ನೀಡುತ್ತದೆ. ಇದರಂತೆ ಸಂಸ್ಕರಣೆ ಘಟಕಗಳು ಇಂಧನ-ಸಮರ್ಥ ತಂತ್ರಜ್ಞಾನ, ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮತ್ತು ನೀರಿನ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರತೆಯನ್ನು ಬೆಂಬಲಿಸುತ್ತದೆ. ಈ ಕ್ರಮಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾನ್ಯತೆ ಹೊಂದಿವೆ ಹಾಗು ಸುಲಭವಾಗಿ ಗುರುತಿಸಲ್ಪಡುತ್ತವೆ. ಕುಕ್ಕುಟ ಸಂಸ್ಕರಣಾ ಘಟಕಗಳ ಸಂಶೋಧನೆ ಮತ್ತು ಸಂಪನ್ಮೂಲಗಳನ್ನು ಹಂಚಿಕೆಯಿಂದ ಗ್ರಾಹಕರ ಇಚ್ಛೆಗಳಿಗೆ ಅನುಗುಣವಾಗಿ ಹೊಸ ಉತ್ಪನ್ನಗಳು ಹಾಗು ಪ್ಯಾಕೇಜಿಂಗ್ ಆಯ್ಕೆಗಳನ್ನು ತರುವಲ್ಲಿ ಯಶಸ್ವಿಯಾಗುತ್ತವೆ.
ಈ ರೀತಿಯ ಪೂರ್ವಭಾವಿ ಕ್ರಮಗಳಿಂದ ಸಂಸ್ಕರಣಾ ಘಟಕಗಳು ಸುಧಾರಿತ ಮೌಲ್ಯ ಪ್ರತಿಪಾದನೆಗಳೊಂದಿಗೆ ಅನನ್ಯ ಉತ್ಪನ್ನಗಳನ್ನು ಒದಗಿಸುತ್ತವೆ. ಜೊತೆಯಲ್ಲಿ ರಫ್ತುಗಳನ್ನು ಹೆಚ್ಚಿಸಲು ಅವಕಾಶಗಳನ್ನು ಸೃಷ್ಟಿ ಮಾಡುತ್ತ ಬರುತ್ತದೆ. ಇದಲ್ಲದೆ, ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (WOAH) ಭಾರತವು ಹೆಚ್ಚು ರೋಗಕಾರಕ ಪಕ್ಷಿ ಜ್ವರ (HPAI) ದಿಂದ ಮುಕ್ತವಾಗಿದೆ ಎಂಬ ಸ್ವಯಂ ಘೋಷಣೆಯನ್ನು ಅಂಗೀಕರಿಸಿದೆ. ಈ ಘೋಷಣೆಯ ಅನುಮೋದನೆಯಿಂದ ಭಾರತೀಯ ಕುಕ್ಕುಟ ಉದ್ಯಮಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳು ದೊರೆಯುವ ನಿರೀಕ್ಷೆಯಿದೆ, ಇದರಿಂದ ದೇಶದ ಆರ್ಥಿಕ ಪ್ರಗತಿಗೆ ಮತ್ತಷ್ಟು ಬಲ ಸಿಗುತ್ತದೆ.
ಒಟ್ಟಾರೆ, ಕುಕ್ಕುಟ ಸಂಸ್ಕರಣಾ ಘಟಕಗಳು ಪರಿಸರ ಜವಾಬ್ದಾರಿಯುತ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು, ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕರಿಸಿದ ಸರಕುಗಳ ರಫ್ತಿಗೆ ಸುಸ್ಥಿರ ವಾತಾವರಣವನ್ನು ಸ್ಥಾಪಿಸಲು ಹಾಗು ವಿದೇಶಿ ವಿನಿಮಯ ಆದಾಯವನ್ನು ಹೆಚ್ಚಿಸುವುದರಲ್ಲಿ ಗಮನಾರ್ಹವಾಗಿ ಕೊಡುಗೆ ನೀಡುತ್ತಾ ಬಂದಿವೆ.
ಲೇಖನ: ಡಾ.ಆರ್.ನರಹರಿ, ಬಿದರೆಕೆರೆ, ಹಿರಿಯೂರು ತಾಲೂಕು, ಚಿತ್ರದುರ್ಗ.
ಲೇಖನ ಮುಂದುವರೆಯಲಿ…

