ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮದ ವಿಶೇಷತೆ ಕೇಳಿನಿಜಕ್ಕೂ ಅಭಿಮಾನವೆನಿಸಿತು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಈ ಗ್ರಾಮದಲ್ಲಿ ಯಾರಾದರೂ ನಿಧನರಾದರೆ, ಇಡೀ ಗ್ರಾಮಸ್ಥರೆಲ್ಲರೂ ಸೇರಿ ಮೂರು ದಿನಗಳ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಉಳಿದ ಹಣವನ್ನು ಅವರ ಮೃತರ ಕುಟುಂಬಕ್ಕೆ ನೀಡುವ ಮೂಲಕ ನೆರವಾಗುತ್ತಾರೆ.
ಈ ರೀತಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಹಾಗೂ ಆರ್ಥಿಕವಾಗಿ ಧೈರ್ಯ ನೀಡುತ್ತಾರೆ ಎಂಬುದನ್ನು ಕೇಳಿ ಮಾನವೀಯ ಮೌಲ್ಯಗಳು ಇಂದಿಗೂ ಇದೆ ಎನಿಸಿತು ಎಂದು ಡಾ.ಪ್ರಭಾ ಹೇಳಿದರು.
ಇದೇ ವೇಳೆ ಗ್ರಾಮದ ಪರಿಮಿತಿಯಲ್ಲಿ ಸುಮಾರು 1.15 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಸುಮಾರು 1 ಕೋಟಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ದಾವಣಗೆರೆ ತಾಲ್ಲೂಕು ಕೈದಾಳೆ ಗ್ರಾಮದ ಪರಿಮಿತಿಯಲ್ಲಿ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ ಜೊತೆಗೆ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು ಎಂದು ಸಂಸದರು ತಿಳಿಸಿದರು.

