ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವದೆಹಲಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡ ನಂತರ, ಸಂಸತ್ ಆವರಣದಲ್ಲಿ ಮಹಿಳಾ ಸಂಸದರೊಂದಿಗೆ ಮಹತ್ವದ ಚರ್ಚೆಯಲ್ಲಿ ಭಾಗವಹಿಸಲಾಯಿತು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಈ ಬಾರಿ ನಡೆದ ಅಧಿವೇಶನವು ಹಲವು ಗಂಭೀರ ಮತ್ತು ಚರ್ಚಾಸ್ಪದ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ವಿಶೇಷವಾಗಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಕರ್ನಾಟಕಕ್ಕೆ ಮತ್ತೆ ಮಲತಾಯಿ ಧೋರಣೆ ಅನುಸರಿಸಿರುವುದು ತೀವ್ರ ನಿರಾಸೆ ಮೂಡಿಸಿದೆ.
ಸದನದಲ್ಲಿ ವಿಪಕ್ಷ ನಾಯಕರ ಧ್ವನಿಯನ್ನು ಹತ್ತಿಕ್ಕಿ, ಮಾತನಾಡುವ ಅವಕಾಶವನ್ನೇ ನಿರಾಕರಿಸಿದ ಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ನಡೆಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ನನ್ನ ಕ್ಷೇತ್ರದಲ್ಲಿ ಜಾರಿಯಾಗಬೇಕಾದ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಚುಕ್ಕಿ ರಹಿತ ಪ್ರಶ್ನೆಗಳು ಹಾಗೂ ಸದನದಲ್ಲಿ ಮಾತನಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ.
ಹೀಗೆಜನರ ಹಿತಾಸಕ್ತಿಯನ್ನು ಪ್ರತಿಬಿಂಬಿಸುವ ಅನೇಕ ಮಹತ್ವದ ವಿದ್ಯಮಾನಗಳು ಈ ಬಜೆಟ್ ಅಧಿವೇಶನದಲ್ಲಿ ನಡೆದವು ಎಂದು ಸಂಸದೆ ಪ್ರಭಾ ಸಂತಸ ವ್ಯಕ್ತಪಡಿಸಿದ್ದಾರೆ.

