ಚಂದ್ರವಳ್ಳಿ ನ್ಯೂಸ್, ಕೊರಟಗೆರೆ:
ಮಹಿಳೆಯ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷ್ಮಿದೇವಮ್ಮ(42) ಕೊಲೆಯಾದ ಮಹಿಳೆ ಎನ್ನಲಾಗಿದೆ. ಅಳಿಯ ದಂತ ವೈದ್ಯ ಡಾ.ರಾಮಚಂದ್ರಯ್ಯ, ಸತೀಶ್ ಮತ್ತು ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ. ಅತ್ತೆ ಕಾಟಕ್ಕೆ ಬೇಸತ್ತು ಅಳಿಯನಿಂದಲೇ ಕೃತ್ಯವೆಸಗಲಾಗಿದೆ. ಕೊರಟಗೆರೆ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಅತ್ತೆ ಕೊಲೆ ಮಾಡಿದ ಅಳಿಯ-
ತನ್ನ ಪತ್ನಿ ಲಕ್ಷ್ಮಿದೇವಿ ಕಾಣೆಯಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಆಕೆಯ ಪತಿ ಬಸವರಾಜ್ ಎಂಬುವರು ಆಗಸ್ಟ್ 3ರಂದು ಮಧ್ಯಾಹ್ನ ಬೆಳ್ಳಾವಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದರು.
ಲಕ್ಷ್ಮೀದೇವಿಯು ತನ್ನ ಮಗಳಾದ ತೇಜಸ್ವಿ ನೋಡಿಕೊಂಡು ಬರುವುದಾಗಿ ಹೇಳಿ ಹೋದವರು ರಾತ್ರಿಯಾದರೂ ಮನೆಗೆ ವಾಪಸ್ ಬರದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ದೂರು ನೀಡಿದ ಬಳಿಕ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಘಟನೆ ನಡೆದಿದ್ದು, ಇದರ ಜಾಡು ಹಿಡಿದ ಪೊಲೀಸರು ಮೃತ ಮಹಿಳೆಯನ್ನು 42 ವರ್ಷದ ಲಕ್ಷ್ಮೀದೇವಮ್ಮ ಎಂದು ಗುರುತಿಸಿದ್ದರು.
ಕೈಕಾಲು ಒಂದು ಕಡೆ, ಹೃದಯದ ಭಾಗ ಮತ್ತೊಂದು ಕಡೆ, ಹೊಟ್ಟೆ, ಕರುಳಿನ ಭಾಗ ಇನ್ನೊಂದು ಕಡೆ, ತಲೆಬುರುಡೆ ಮತ್ತು ಮುಖವನ್ನು ಜಜ್ಜಿ ವಿರೂಪಗೊಳಿಸಿ ರಸ್ತೆಯ ಪಕ್ಕದಲ್ಲಿ ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 19 ಸ್ಥಳಗಳಲ್ಲಿ ಬಿದ್ದಿದ್ದ ಮೃತ ದೇಹದ ಅಂಗಾಂಗಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದರು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರಿನ ಚಲನವಲನವನ್ನು ಸ್ಥಳೀಯರು ಗಮನಿಸಿದ್ದರು. ಸಿಸಿಟಿವಿಯಲ್ಲಿಯೂ ಕಾರಿನ ಚಲನವಲನ ದಾಖಲಾಗಿತ್ತು. ಕಾರಿನ ನಂಬರ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಎ1 ಆರೋಪಿ ಮೃತ ಮಹಿಳೆಯ ಅಳಿಯ ಡಾ.ರಾಮಚಂದ್ರಯ್ಯ ತುಮಕೂರು ನಗರದ ಪ್ರತಿಷ್ಠಿತ ದಂತ ವೈದ್ಯನಾಗಿ ಕೆಲಸ ಮಾಡುತ್ತಿದ್ದರು. ಅಳಿಯ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ.

