ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಂದಿನ ಮಕ್ಕಳು ಕಾಣುವ ಕನಸು ನನಸಾಗಲು ಶ್ರಮಪಡುವುದು ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಹೇಳಿದರು.
ನಗರದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಮಹಾಸಭೆಯನ್ನು ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಗುವಿನ ಬಾಲ್ಯದಲ್ಲಿ ಉತ್ತೇಜಿಸುವ ಕಾರ್ಯಗಳು ಮಗುವಿನ ಮನಸ್ಸಿನ ಮೇಲೆ ಪ್ರಭಾವಬೀರಿ, ಮುಂದಿನ ಸಾಧನೆಗೆ ದಾರಿ ದೀಪವಾಗುತ್ತವೆ. ಪೋಷಕರು ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸೂಕ್ತವಾದ ದಾರಿಗಳನ್ನು ಕಂಡುಕೊಳ್ಳಬೇಕು. ಮಗುವನ್ನು ಶಾಲೆಗೆ ದಾಖಲು ಮಾಡಿದ ನಂತರ ಪ್ರತಿ ತಿಂಗಳೂ ಜರುಗುವ ಮಾಸಿಕ ಸಭೆಯಲ್ಲಿ ಬೋಧನೆ ಹಾಗೂ ಕಲಿಕೆಯ ಕುರಿತು ಚರ್ಚಿಸಿ, ಸೂಕ್ತ ಮಾಹಿತಿಗಳನ್ನು ನೀಡಿದಲ್ಲಿ ಶಾಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತಮಪಡಿಸಲು ಸೂಕ್ತ ವೇದಿಕೆಯಾಗುವುದು ಎಂದು ತಿಳಿಸಿದರು.
ಸರ್ಕಾರ ಹಾಗೂ ಇಲಾಖೆಯಿಂದ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಉಚಿತ ಮಧ್ಯಾಹ್ನ ಬಿಸಿಯೂಟ ಯೋಜನೆ, ಉಚಿತ ವಿದ್ಯಾರ್ಥಿವೇತನ, ಪೂರಕ ಪೌಷ್ಟಿಕ ಆಹಾರದಂಥ ಕಾರ್ಯಕ್ರಮಗಳ ಹಮ್ಮಿಕೊಂಡು ಮಕ್ಕಳ ದೈಹಿಕ ಹಾಗೂ ಆರೋಗ್ಯ ಬೆಳವಣಿಗೆಗೆ ಸಹಾಯ ಮಾಡುತ್ತಿದೆ.
ಇವಲ್ಲದೆ ಭೌತಿಕ ಸೌಲಭ್ಯ ಉತ್ತಮಪಡಿಸಿಕೊಳ್ಳಬೇಕಾದರೆ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು ಹಾಗೂ ಪ್ರತಿನಿತ್ಯ ಶಾಲೆಗೆ ಕಳುಹಿಸಿಕೊಡುವುದು ಪ್ರಮುಖವಾಗಿದೆ ಎಂದು ಹೇಳಿದರು.
ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡಬೇಕೆಂದರೆ, ಶಾಲೆಯಲ್ಲಿ ಜರುಗುವ ಚಟುವಟಿಕೆಗಳನ್ನು ಮಕ್ಕಳು ಪ್ರತಿನಿತ್ಯ ಪೋಷಕರಲ್ಲಿ ಹೇಳಿಕೊಳ್ಳುತ್ತವೆ. ಅವುಗಳನ್ನು ಪುರಸ್ಕರಿಸುತ್ತಾ, ಶೈಕ್ಷಣಿಕ ಕಲಿಕೆಗೆ ಅಗತ್ಯವಾದ ಅಂಶಗಳನ್ನು ಶಾಲಾ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು.
ಪ್ರತಿ ತಿಂಗಳೂ ಜರುಗುವ ಎಸ್.ಡಿ.ಎಂ.ಸಿ ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಚರ್ಚೆ ಆಗಬೇಕು ಹಾಗೂ ಶಾಲಾಭಿವೃದ್ಧಿಗೆ ಪೋಷಕರು ಸಹಕರಿಸಬೇಕು ಎಂದು ತಿಳಿಸಿದ ಅವರು, ಶೇ.100 ಹಾಜರಾತಿ ಇರುವಂತೆ ಶಿಕ್ಷಕರು ಕ್ರಮವಹಿಸಬೇಕು ಮಕ್ಕಳ ಕಲಿಕೆಯನ್ನು ಉತ್ತಮಪಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕವಾಡಿಗರ ಹಟ್ಟಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್. ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಆರ್.ಮಂಜುನಾಥ್, ನಾಸಿರುದ್ಧಿನ್, ಡಿವೈಪಿಸಿ ವೆಂಕಟೇಶಪ್ಪ, ಡಯಟ್ ಹಿರಿಯ ಉಪನ್ಯಾಸಕರಾದ ಎಸ್.ನಾಗಭೂಷಣ್, ಚಿತ್ರದುರ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‍ಕುಮಾರ್. ಗ್ರಾಮ ಪಂಚಾಯಿತಿ ಸದಸ್ಯ ಎನ್.ಪ್ರಭು, ಶಾಲಾ ಮುಖ್ಯ ಶಿಕ್ಷಕ ರುದ್ರಮುನಿ ಇದ್ದರು.

