ಪೌಷ್ಠಿಕ ಆಹಾರ ಪೂರೈಕೆ ಯೋಜನೆ ಮೇಲ್ವಿಚಾರಣೆಗೆ ಕ್ರಮವಹಿಸಿ- ಡಾ.ಸಂಜಯ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಕಳೆದ ಒಂದು ತಿಂಗಳಿಂದ ಅನುಷ್ಠಾನಗೊಂಡಿದ್ದು, ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜಯ್ ಎಸ್ ಬಿಜ್ಜೂರ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಗಣಿ ಪರಿಸರ  ಪುನಶ್ಚೇತನ ನಿಗಮದ (ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ) ಸಿಇಪಿಎಂಐಝಡ್ ಯೋಜನೆ ಅಡಿಯಲ್ಲಿ ಕೈಗೊಳ್ಳಲಿರುವ ಕಾಮಗಾರಿ, ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

- Advertisement - 

ಕೆಎಂಇಆರ್‍ಸಿ ಇಲಾಖೆಯ ಸಿಇಪಿಎಂಐಜೆಡ್ ಪ್ರಾಜೆಕ್ಟ್ ಆರ್ಥಿಕ ಅನುದಾನದಡಿ ಜಿಲ್ಲೆಯ ಗಣಿಭಾದಿತ ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದ್ದು, ಯಾವುದೇ ಲೋಪದೋಷ ಇಲ್ಲದಂತೆ ಬಹಳ ಬದ್ಧತೆಯಿಂದ ಯೋಜನೆ ತಲುಪಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಪಿಎಂ ಪೋಷಣ್ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪೂರಕ ಪೌಷ್ಠಿಕ ಆಹಾರ ವಿತರಣೆಯು ಶಾಲಾ ಮಕ್ಕಳಿಗೆ ಬಹಳ ಮುಖ್ಯವಾಗಿದ್ದು, ಇದರಿಂದ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲಿದ್ದಾರೆ. ಈ ಯೋಜನೆಗೆ ಸಂಬಂಸಿದಂತೆ ಅಗತ್ಯ ಪರಿಕರಗಳನ್ನು ಆಡಳಿತಾತ್ಮಕ ಅನುದಾನದಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ  ನೀಡುವುದು ನಮ್ಮ ಮೊದಲ ಆದ್ಯತೆಯಾಗಬೇಕಿದೆ.  ಆರೋಗ್ಯವಂತ ಮಕ್ಕಳೇ ನಮ್ಮ ದೇಶದ ಭದ್ರ ಬುನಾದಿಯಾಗಿದ್ದು, ಇದರಿಂದ ಸಮಾಜಕ್ಕೆ ನಾವು ಉತ್ತಮ ಕೊಡುಗೆ ನೀಡಿದಂತಾಗಲಿದೆ.  ಈ ನಿಟ್ಟಿನಲ್ಲಿ ಕೈಗೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಕೆಎಂಆರ್‍ಸಿ ನಿಗಮವು ಸಹಕಾರ ನೀಡಲಿದೆ ಎಂದರು.

- Advertisement - 

ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯ ಜನರ ಜೀವನೋಪಾಯಕ್ಕಾಗಿ ಯಾವ ರೀತಿಯ ಸುಧಾರಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 37 ಪ್ರಸ್ತಾವನೆಗಳು ಬರುವುದು ಬಾಕಿ ಇದ್ದು, ಕೆಲವು ಯೋಜನೆಗಳು ಇತ್ತೀಚೆಗೆ ಮಂಜೂರಾಗಿದ್ದು, ಕೆಲವು ಪ್ರಸ್ತಾವನೆಗಳು ಬಾಕಿ ಇವೆ. ಆದಷ್ಟು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ನಂತರ ವಿಸ್ತøತ ಯೋಜನಾ ವರದಿ ತಯಾರಿಸಬೇಕು ಎಂದರು.

 ಜಿಲ್ಲೆಯ ವಿದ್ಯಾರ್ಥಿ ನಿಲಯಗಳ ದುರಸ್ತಿ ಕಾರ್ಯಕ್ಕಾಗಿ ಕಳೆದ ತಿಂಗಳು ಅನುಮೋದನೆ ನೀಡಿದ್ದು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳನ್ನು ವಿದ್ಯಾರ್ಥಿಗಳಿಗೆ ಅಗತ್ಯಕ್ಕೆ ತಕ್ಕಂತೆ ಕಾಳಜಿ ವಹಿಸಿ, ವಿಸ್ತøತಾ ಯೋಜನೆ ವರದಿ ತಯಾರಿಸಬೇಕು ಎಂದು ತಿಳಿಸಿದ ಅವರು, ಕಾಲೇಜು ಶಿಕ್ಷಣ ಇಲಾಖೆಯವರು ಯೋಜನೆ ಮಂಜೂರಾಗಿ 10 ತಿಂಗಳಾದರೂ ಡಿಪಿಆರ್ ಸಲ್ಲಿಕೆ ಮಾಡಿಲ್ಲ ಈ ಕುರಿತು ಅಗತ್ಯ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಎರಡು ವರ್ಷ ಬೇಕಾ?:
ಜಿಲ್ಲೆಯ ಗಣಿಬಾಧಿತ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದು, ಎರಡು ವರ್ಷಗಳ ಕಳೆದರೂ ಆರೋಗ್ಯ ಉಪಕೇಂದ್ರ ನಿರ್ಮಾಣವಾಗದೇ ಇರುವುದಕ್ಕೆ ಕೆಎಂಇಆರ್‍ಸಿ ವ್ಯವಸ್ಥಾಪಕ ನಿರ್ದೇಶಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಶೀಘ್ರವಾಗಿ ಆರೋಗ್ಯ ಉಪಕೇಂದ್ರಗಳನ್ನು ನಿರ್ಮಿಸಿ, ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವಂತಾಗಬೇಕು.  ವಿಳಂಬ ಮಾಡಿದರೆ, ಯೋಜನೆಯ ಅನುದಾನವನ್ನು ಹಿಂಪಡೆದು, ಅಗತ್ಯ ಇರುವ ಕಡೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೊಳಲ್ಕೆರೆ ತಾಲ್ಲೂಕಿನಲ್ಲ್ಲಿ 5 ಆರೋಗ್ಯ ಉಪಕೇಂದ್ರ, 1 ಕ್ವಾರ್ಟಸ್, ಚಿತ್ರದುರ್ಗ ತಾಲ್ಲೂಕಿನಲ್ಲಿ 10 ಆರೋಗ್ಯ ಉಪಕೇಂದ್ರ ಹಾಗೂ 16 ಕ್ವಾರ್ಟಸ್, ಹೊಸದುರ್ಗ ತಾಲ್ಲೂಕಿನಲ್ಲಿ 9 ಉಪಕೇಂದ್ರ, 23 ಕ್ವಾರ್ಟಸ್ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಡಿಹೆಚ್‍ಒ ಡಾ ರೇಣುಪ್ರಸಾದ್ ಸಭೆಗೆ ಮಾಹಿತಿ ನೀಡಿದರು.

ಶಾಲಾ ಕಟ್ಟಡಗಳ ನಿರ್ಮಾಣ ಬೇಗ ಮುಗಿಸಿ :
ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು.  ಈಗಾಗಲೆ ಸಲ್ಲಿಸಿ, ಅನುಮೋದನೆ ಪಡೆಯಲಾಗಿರುವ ಡಿಪಿಆರ್ ನಂತೆಯೇ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯವರು ಕೈಗೊಳ್ಳಬೇಕು.  ಆದರೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವಾಗ, “ಪ್ರಸ್ತಾವಿತ ಕಾಮಗಾರಿಗಳಲ್ಲಿ ಬೇರೆ ಯಾವುದೇ ಅನುದಾನದಡಿ ಈಗಾಗಲೆ ಇದೇ ಕಾಮಗಾರಿಯನ್ನು ಕೈಗೊಂಡಿದ್ದರೆ, ಅಂತಹ ಕಾಮಗಾರಿ ಕೈಗೊಳ್ಳಬಾರದು, ಇತರೆ ತುರ್ತು ಕಾಮಗಾರಿ ಕೈಗೊಳ್ಳುವುದು ಅಗತ್ಯವಿದ್ದರೆ, ಡಿಡಿಪಿಐ ಹಾಗೂ ಲೋಕೋಪಯೋಗಿ ಇಲಾಖೆಯ ಅನುಮೋದನೆ ಪಡೆದು ಕೈಗೊಳ್ಳಬೇಕುಎಂಬ ಷರತ್ತನ್ನು ಗುತ್ತಿಗೆದಾರರಿಗೆ ವಿಧಿಸಬೇಕು.  ಇಲ್ಲದಿದ್ದರೆ, ಅಧಿಕಾರಿಗಳು ಮತ್ತೆ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಪಡೆಯಲು ಸಮಯ ವ್ಯರ್ಥವಾಗಲಿದೆ ಎಂದು ಕೆಎಂಆರ್‍ಸಿ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದರು.

ವಸತಿ ಯೋಜನೆಗೆ 2018 ರ ಸಮೀಕ್ಷೆಯೇ ಆಧಾರ :
ಕೆಎಂಇಆರ್‍ಸಿ ಯೋಜನೆಯಡಿ ವಸತಿ ರಹಿತ ಫಲಾನುಭವಿಗಳಿಗೆ ಮನೆ ಮಂಜೂರು ಮಾಡುವ ಮೊದಲು, ಸಂಬಂಧಿಸಿದ ಗ್ರಾಮ ಸಭೆಗಳಲ್ಲಿ ಮಂಡಿಸಿ, ಅನುಮೋದನೆ ಪಡೆದು ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಬೇಕು.  ಇದಕ್ಕೆ ಕಳೆದ 2018 ರಲ್ಲಿ ಕೈಗೊಳ್ಳಲಾಗಿರುವ ವಸತಿ ರಹಿತರ ಸಮೀಕ್ಷಾ ವರದಿಯನ್ನೇ ಆಧಾರವಾಗಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.  ಮೊದಲ ಹಂತದಲ್ಲಿ 05 ಕಿ.ಮೀ. ವ್ಯಾಪ್ತಿಯೊಳಗಿನ ಎಲ್ಲ ಗ್ರಾಮಗಳನ್ನು ಆಯ್ಕೆ ಮಾಡಿ, ಗ್ರಾಮ ಸಭೆ ನಡೆಸಿ ವರದಿ ಸಲ್ಲಿಸಬೇಕು.  ಈ ಯೋಜನೆಯಡಿ ಯಾವುದೇ ಗುರಿ ನಿಗದಿಪಡಿಸಿಲ್ಲ, ಹೀಗಾಗಿ ಅರ್ಹ ಎಲ್ಲ ಫಲಾನುಭವಗಳಿಗೆಊ ಈ ಯೋಜನೆಯಡಿ ವಸತಿ ಮಂಜೂರಾತಿ ದೊರೆಯಲಿದೆ.

 ಈ ಕುರಿತ ಎಲ್ಲ ಮಾರ್ಗಸೂಚಿಗಳನ್ನು ಕೆಎಂಆರ್‍ಸಿ ವೆಬ್‍ಸೈಟ್‍ನಲ್ಲಿಯೇ ಪ್ರಕಟಿಸಲಾಗಿದೆ, ಗ್ರಾ.ಪಂ. ಪಿಡಿಒ ಗಳು ಪರಿಶೀಲಿಸಿ, ಅದರಂತೆಯೇ ಕ್ರಮ ಕೈಗೊಳ್ಳಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್. ಆಕಾಶ್, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯನಾಯ್ಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಮಹೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

 

 

 

 

Share This Article
error: Content is protected !!
";