ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ‘ರಾಜ್ಯದ ಉತ್ತಮ ಆಡಳಿತದ ಬಗ್ಗೆ ತಿಳಿದುಕೊಳ್ಳಲು ಬರುವ ಇತರೆ ರಾಜ್ಯಗಳ ಅಧಿಕಾರಿಗಳಿಗೆ ನಮ್ಮ ಸಂಸ್ಥೆ ವತಿಯಿಂದ ತರಬೇತಿ ನೀಡುತ್ತಿರುವುದು ನಮ್ಮ ರಾಜ್ಯದ ಹೆಮ್ಮೆಯ ವಿಷಯವಾಗಿದೆ ಎಂದು ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರು ಹರ್ಷ ವ್ಯಕ್ತಪಡಿಸಿದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮೇ 9 ರಿಂದ 12 ರವರೆಗೆ ನಾಲ್ಕು ದಿನಗಳ ಕಾಲ 2024ನೇ ಬ್ಯಾಚ್ನ ತ್ರಿಪುರ ರಾಜ್ಯದ ಆಡಳಿತ ಸೇವೆಗೆ ಸೇರಿದ ‘ಎ‘ ವೃಂದದ ಒಟ್ಟು 30 ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಿಂದ ಪ್ರತಿ ವರ್ಷ ಸರಾಸರಿ 280 ತರಬೇತಿ ಕಾರ್ಯಕ್ರಮಗಳ ಮೂಲಕ ಸುಮಾರು ಈವರೆಗೆ 8400 ಗ್ರೂಪ್ ‘ಎ‘ ಮತ್ತು ‘ಬಿ‘ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ ಇ–ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಉತ್ತಮ ಆಡಳಿತ (good governance) ಹಾಗೂ ನಾಗರಿಕ ಸ್ನೇಹಿ (citizen centric e-governance initiatives) ಯೋಜನೆಗಳಾದ ‘ಭೂಮಿ‘, ‘ಮೋಜಿಣಿ‘, ‘ಸೇವಾಸಿಂಧು‘, ‘ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ‘ (ULMS), ‘ಕೂಸಿನ ಮನೆ‘ ಇತ್ಯಾದಿ ಯಶಸ್ವಿ ಯೋಜನೆಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ.
ತರಬೇತಿ ಜೊತೆಗೆ ಪ್ರಶಿಕ್ಷಣಾರ್ಥಿಗಳು ಮೈಸೂರಿನ ಪಾರಂಪರಿಕ ಸ್ಥಳಗಳು, ಚಾಮರಾಜನಗರ ಜಿಲ್ಲೆಯ ನಿಟ್ರಿ ಗ್ರಾಮ ಪಂಚಾಯತಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.