ತೊಗರಿ, ಶೇಂಗಾ ಬೆಳೆ ಹಾನಿಗೆ ಮಧ್ಯಂತರ ಪರಿಹಾರ ನೀಡಲಿ-ಡಾ.ಶಿವಲಿಂಗಪ್ಪ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೈತರ ಬೆಳೆ ಹಾನಿಗೆ ಮಧ್ಯಂತರ ಪರಿಹಾರಕ್ಕಾಗಿ ಬೆಳೆ ವಿಮೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಗೆ ಜಿಲ್ಲಾಧಿಕಾರಿಗಳು ಕಟ್ಟಪ್ಪಣೆ ಮಾಡುವಂತೆ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ.ಶಿವಲಿಂಗಪ್ಪ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೫-೨೬ ನೇ ಸಾಲಿನ ತೊಗರಿ ಬೆಳೆ ಮಧ್ಯಂತರ ಪರಿಹಾರಕ್ಕಾಗಿ ರೈತರ ನೆರವಿಗೆ ಬರಬೇಕು.

- Advertisement - 

 ಕಂದಾಯ, ಕೃಷಿ, ತೋಟಗಾರಿಕೆ, ಇನ್ಸ್‌ರೆನ್ಸ್ ಕಂಪನಿಯವರು ಅ.೩ ರಂದು ಚಳ್ಳಕೆರೆಯಲ್ಲಿ ರೈತ ಮುಖಂಡರ ಸಭೆ ನಡೆಸಿ ಐದು ವಾರ ಮಳೆ ಬಂದಿಲ್ಲ. ಮಧ್ಯಂತರ ಪರಿಹಾರ ನೀಡಲು ಅವಕಾಶವಿದೆಯೆಂದು ತೀರ್ಮಾನಿಸಿದ್ದನ್ನು ಬಿಟ್ಟರೆ ಇದುವರೆವಿಗೂ ಮಧ್ಯಂತರ ಪರಿಹಾರ ಸಿಕ್ಕಿಲ್ಲ. ನಂತರ ಸಭೆ ಕರೆದು ಜಂಟಿ ಸಮೀಕ್ಷೆ ನಡೆಸಿ ಎಂದು ಕೃಷಿಗೆ ಸಂಬಂಧಿಸಿದ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರೆ ವಿನಃ ಯಾವ ಉಪಯೋಗವೂ ಆಗಿಲ್ಲ ಎಂದು ಆಪಾದಿಸಿದರು.

ಚಳ್ಳಕೆರೆಯಲ್ಲಿ ನಡೆದ ಸಭೆಯನ್ನು ಹೊರತುಪಡಿಸಿದರೆ ಬೆಳೆ ವಿಮೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯವರು ಮತ್ತೆ ಸಭೆಗೆ ಹಾಜರಾಗಲಿಲ್ಲ. ಸಮೀಕ್ಷೆ ವರದಿಗೂ ಬೆಳೆ ವಿಮಾ ಕಂಪನಿ ಸಹಿ ಹಾಕಲಿಲ್ಲ. ಕೊನೆ ಕಟಾವಿಗೂ ಮಧ್ಯಂತರ ಪರಿಹಾರಕ್ಕೂ ಸಂಬಂಧವಿಲ್ಲ. ಗ್ರಾಹಕರ ನ್ಯಾಯಾಲಯಕ್ಕೆ ಹೋದರೂ ರೈತರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಅಸಹಾಯಕರಾಗಿ ಅನಾಥರಾಗಿದ್ದೇವೆ. ಮಳೆ ಇಲ್ಲ. ಬೆಳೆಯೂ ಇಲ್ಲ ಎಂದು ಸಂಕಷ್ಟಗಳನ್ನು ತೋಡಿಕೊಂಡರು.

- Advertisement - 

ಚಳ್ಳಕೆರೆ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಬೆಳೆ ಕಡಿಮೆಯಿದೆ. ಇಳುವರಿಗೂ ಬೆಳೆ ಪ್ರಮಾಣಕ್ಕೂ ಒಂದಕ್ಕೊಂದು ತಾಳೆಯಿಲ್ಲದಂತಾಗಿದೆ. ಬೆಳೆ ವಿಮೆ ಪಾವತಿಸಿರುವ ಎಲ್ಲಾ ವಿಮೆದಾರರಿಗೂ ಅನ್ಯಾಯವಾಗುತ್ತಿರುವುದರಿಂದ ರೈತರು ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲಾಧಿಕಾರಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬೆಳೆ ವಿಮೆ ಮಧ್ಯಂತ ಪರಿಹಾರ ನೀಡುವಂತೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಗೆ ಸೂಚಿಸಬೇಕೆಂದು ಡಾ.ಸಿ.ಶಿವಲಿಂಗಪ್ಪ ಒತ್ತಾಯಿಸಿದರು.

ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಕೃಷಿಗೆ ರೈತರ ಕಾರ್ಮಿಕರ ಅಪಾರ ಶ್ರಮವಿದೆ. ಕಂದಾಯ, ಕೃಷಿ, ತೋಟಗಾರಿಕೆ, ವಿದ್ಯುತ್ ಇಲಾಖೆಯವರು ಜವಾಬ್ದಾರಿಯಿಂದ ಕೆಲಸ ಮಾಡದ ಕಾರಣ ರೈತ ಸಂಕಷ್ಟ ಎದುರಿಸುವಂತಾಗಿದೆ. ಬೆಳೆ ಸಮೀಕ್ಷೆ ಅವೈಜ್ಞಾನಿಕವಾಗಿದೆ.

ಬೆಳೆ ಹಾನಿಗೆ ಯಾರೋ ಬಂದು ಸಮೀಕ್ಷೆ ಮಾಡುತ್ತಿರುವುದರಿಂದ ರೈತರಿಗೆ ಮೋಸವಾಗುತ್ತಿದೆ. ಎರಡುವರೆ ವರ್ಷಕ್ಕೆ ಎರಡುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಹಾರ ಭದ್ರತೆ ಹೇಗೆ ಸುರಕ್ಷಿತವಾಗಿ ಕಾಪಾಡಬೇಕೆಂಬ ಪ್ರಜ್ಞೆ ಅಧಿಕಾರಿಗಳಲ್ಲಿ ಇಲ್ಲದಂತಾಗಿದೆ. ಹಾಗಾಗಿ ಅವೈಜ್ಞಾನಿಕ ಸಮೀಕ್ಷೆ ರದ್ದಾಗಬೇಕೆಂದು ಆಗ್ರಹಿಸಿದರು.

ಸರ್ವೊದಯ ಕರ್ನಾಟಕ ಪಕ್ಷದ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಮಾತನಾಡಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳು ಸೇರಿಕೊಂಡು ರೈತರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಮಧ್ಯಂತರ ಪರಿಹಾರ ದೊರಕಿಸುವಲ್ಲಿ ವಂಚಿಸುತ್ತಿದ್ದಾರೆ. ಬೆಳೆ ವಿಮೆ ಕಂಪನಿಗಳು ರೈತರಿಂದ ವಿಮೆ ಪಾವತಿಸಿಕೊಂಡು ವ್ಯವಸ್ಥಿತವಾಗಿ ಮೋಸ ಮಾಡುತ್ತಿರುವುದರಿಂದ ರೈತ ನಷ್ಟ ಅನುಭವಿಸುವಂತಾಗಿದೆ. ಕೃಷಿ, ಕಂದಾಯ, ತೋಟಗಾರಿಕೆ, ವಿಮೆ ಕಂಪನಿಗಳು ಜಂಟಿಯಾಗಿ ಸೇರಿಕೊಂಡು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದಾಗ ಮಾತ್ರ ರೈತರಿಗೆ ನ್ಯಾಯ ಒದಗಿಸಬಹುದು ಎಂದು ಹೇಳಿದರು.

ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ಕರಿಯಪ್ಪ, ಕಾರ್ಯದರ್ಶಿ ಎಸ್.ಪ್ರಕಾಶ್, ಸಹ ಕಾರ್ಯದರ್ಶಿ ಡಾ.ಆರ್.ಎ.ದಯಾನಂದ್, ಯರ್ರಿಸ್ವಾಮಿ, ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
error: Content is protected !!
";