ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ನೀಡಲಿ-ಡಾ.ಶಿವಲಿಂಗಪ್ಪ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಂಗಾರು ಮತ್ತು ಹಿಂಗಾರು ಹಂಗಾಮಿನ ಪ್ರತಿಕೂಲತೆಯಿಂದ ತೊಗರೆ ಫಸಲು ಸಂಪೂರ್ಣ ನಾಶವಾಗಿದ್ದು ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಮಧ್ಯಂತರ ಪರಿಹಾರವಾಗಿ ಶೇ 25ರಷ್ಟು ಬೆಳೆ ವಿಮೆ ಮೊತ್ತ ಬಿಡುಗಡೆ ಮಾಡುವಂತೆ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಬಿದ್ದ ಅಸಮರ್ಪಕ ಮಳೆಯಿಂದಾಗಿ ಶೇ.50ಕ್ಕಿಂತ ಕಡಿಮೆ ಇಳುವರಿ ಬರುವ ಸಾಧ್ಯತೆ ಇದ್ದು ಕೂಡಲೇ ತೊಗರಿ ಫಸಲು ಕುಂಠಿತವಾಗುವುದರಿಂದ ಮಧ್ಯಂತರ ಪರಿಹಾರವಾಗಿ ಬೆಳೆವಿಮೆಯ ಶೇಕಡ 25% ರಷ್ಟು ಮೊತ್ತವನ್ನು ನೀಡಲು ಅವಶ್ಯಕವಿರುವ ವಿವಿಧ ಇಲಾಖೆಗಳು ಮತ್ತು ವಿಮಾ ಕಂಪನಿಗಳೊಂದಿಗೆ ಜಂಟಿ ಸಮೀಕ್ಷೆ ಕಾರ್ಯಕ್ಕೆ ಸೂಚನೆ ನೀಡಿದ್ದು ನ್ಯಾಯಯುತ ಕ್ರಮವಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

- Advertisement - 

ಆದರೆ ಕೃಷಿ, ಕಂದಾಯ, ತೋಟಗಾರಿಕೆ ಮುಂತಾದ ಇಲಾಖೆಗಳು ವಿಮಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ತಾಲ್ಲೂಕಿನ ನಾಲ್ಕು ಹೋಬಳಿಯ ತೊಗರಿ ಬೆಳೆಯ ಮಹಜರು ಮಾಡಲು ನವೆಂಬರ್ 11 ರಿಂದ 13 ರವರೆಗೆ ಜಂಟಿ ಸಮೀಕ್ಷೆ ಕೈಗೊಂಡಾಗ, ನವೆಂಬರ್ 11 ರಂದು ಮಾತ್ರ ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಜರಾಗಿದ್ದಾರೆ. ಆದರೆ 12 ಮತ್ತು 13 ರಂದು ನಡೆಸಿದ ಜಂಟಿ ಸಮೀಕ್ಷೆಗೆ ಅವರು ಗೈರಾಗಿದ್ದಾರೆ.

ವಿಮಾ ಪ್ರತಿನಿಧಿಗಳು ಜಂಟಿ ಸಮೀಕ್ಷೆಗೆ ಹಾಜರಾಗದೆ ಮಧ್ಯಂತರ ಪರಿಹಾರ ನೀಡಲು ಅಸಹಕಾರ ಕೋರುವುದರ ಮೂಲಕ ತೊಗರಿ ಬೆಳೆ ವಿಮೆದಾರರಿಗೆ ಅನ್ಯಾಯ ಮಾಡಲು ಮುಂದಾಗಿರುವುದು ರೈತರಿಗೆ ವಂಚನೆ ಮಾಡುವ ಉದ್ದೇಶವೇ ಆಗಿದೆ ಎಂದು ಸಂಘ ಆರೋಪಿಸಿದೆ.

- Advertisement - 

ಪ್ರಯುಕ್ತ ಈ ಮನವಿಯನ್ನು ಪರಿಶೀಲಿಸಿ ತೊಗರಿ ಬೆಳೆವಿಮೆದಾರರಿಗೆ ಶೇಕಡ 25% ರಷ್ಟು ಬೆಳೆ ವಿಮೆಯ ಮೊತ್ತವನ್ನು ವಿಳಂಬ ಮಾಡದೆ ಕೊಡಿಸುವುದರ ಮುಖೇನ ರೈತರನ್ನು ಕೈಹಿಡಿಯಬೇಕೆಂದು ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ ಶಿವಲಿಂಗಪ್ಪ, ಉಪಾಧ್ಯಕ್ಷ ಕರಿಯಪ್ಪ, ಕಾರ್ಯದರ್ಶಿ ಪ್ರಕಾಶ್, ಪ್ರಗತಿಪರ ರೈತ ದಯಾನಂದಮೂರ್ತಿ, ಸಿ.ವೀರಣ್ಣ, ಭರತೇಶ್ ರೆಡ್ಡಿ, ಸಿದ್ದೇಶ್ವರಪ್ಪ ಸೇರಿದಂತೆ ಮತ್ತಿತರರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.  

Share This Article
error: Content is protected !!
";